

ಯಲಬುರ್ಗಾ: ಕಳೆದ ವಾರದಿಂದ ತಾಲೂಕಾದ್ಯಂತ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ತಾಲೂಕಿನ ಕಲಭಾವಿ ಗ್ರಾಮದ ನಿವಾಸಿ ಕರಿಯಮ್ಮ ರಾಮಪ್ಪ ತಳವಾರ್ ಮನೆ ಗುರುವಾರ ಕುಸಿದಿದೆ.
ಹಳೆಯ ಮಣ್ಣಿನ ಮನೆಯಲ್ಲಿ ತಳವಾರ್ ಕುಟುಂಬ ವಾಸವಿದ್ದು, ಆಕಸ್ಮಿಕವಾಗಿ ಮಳೆಗೆ ಮನೆ ಕುಸಿದ ಪರಿಣಾಮ ತಾಯಿ ಮತ್ತು ಮಗು ಅಪಾಯದಿಂದ ಪಾರಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯಲ್ಲಿದ್ದ ದವಸ ಧಾನ್ಯ ಹಾಳಾಗಿದೆ. ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು, ಚಿಕಿತ್ಸೆಗಾಗಿ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಗ್ರಾಪಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಘಟನೆ ಕುರಿತು ಮಾಹಿತಿ ಪಡೆದು ಮೇಲಧಿಕಾರಿಗಳ ಗಮನಕ್ಕೆ ತಂದು, ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.