

ಯಲಬುರ್ಗಾ: ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಯಲಬುರ್ಗಾ ಮತ್ತು ಕುಕನೂರು ತಾಲೂಕು ಎಸ್ಸಿ, ಎಸ್ಟಿ ಬ್ಲಾಕ್ ಕಾಂಗ್ರೆಸ್ ಘಟಕ ಶುಕ್ರವಾರ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಮುಖಂಡ ಮಾನಪ್ಪ ಪೂಜಾರ ಮಾತನಾಡಿ, ರಾಜ್ಯದ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಸಂವಿಧಾನ ಬದ್ಧವಾಗಿ ಹಕ್ಕು ನೀಡುವಲ್ಲಿ ತಾರತಮ್ಯ ಮಾಡಿ, ದಲಿತರಿಗೆ ಅನ್ಯಾಯ ಮಾಡಿದೆ. ಚುನಾವಣೆಗಾಗಿ ದಲಿತರ ಮತ ಸೆಳೆಯುವ ಉದ್ದೇಶದಿಂದ ಶೆಡ್ಯೂಲ್-9ನಲ್ಲಿ ಸೇರಿಸದೆ ಮೀಸಲಾತಿ ಘೋಷಿಸಿದೆ. ಇದರಿಂದ ದಲಿತರಿಗೆ ಮೀಸಲಾತಿ ದೊರೆಯುವುದಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಸ್ಸಿ, ಎಸ್ಟಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿ ಅಧ್ಯಯನ ನಡೆಸಲು ನ್ಯಾ.ನಾಗಮೋಹನದಾಸ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಇದರಲ್ಲಿ ಎಸ್ಸಿಗೆ ಶೇ.15 ರಿಂದ 17, ಎಸ್ಟಿಗೆ ಶೇ.3 ರಿಂದ 7 ಮೀಸಲಾತಿ ಪ್ರಮಾಣ ಏರಿಕೆ ಮಾಡುವಂತೆ ಆಯೋಗ ಶಿಫಾರಸು ಮಾಡಿದ್ದು, ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಸರ್ಕಾರ ಜಾರಿ ಮಾಡುವಲ್ಲಿ ನಿರ್ಲಕ್ಷಿಸಿದೆದೆ. ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ, ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಹನುಮೇಶ ಕಡೇಮನಿ, ಮಹೇಶ ದೊಡ್ಡಮನಿ, ಶಿವಾನಂದ ಬಣಕಾರ, ಶರಣಮ್ಮ ಪೂಜಾರ ಮಾತನಾಡಿದರು.
ಪಟ್ಟಣದ ಕನಕದಾಸ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಚನ್ನಮ್ಮ ವೃತ್ತ ಮುಖಾಂತರ ತಹಸಿಲ್ ಕಚೇರಿ ತಲುಪಿತು. ಗ್ರೇಡ್ 2 ತಹಸೀಲ್ದಾರ್ ನಾಗಪ್ಪ ಸಜ್ಜನ್‌ಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಈಶಪ್ಪ ಶಿರೂರು, ಓಬಳೆಪ್ಪ ಕುಲಕರ್ಣಿ, ಮುತ್ತು ವಾಲ್ಮೀಕಿ, ಮಲ್ಲು ಜಕ್ಕಲಿ, ಶರಣಗೌಡ ಬಸಾಪುರ, ಕಳಕೇಶ ಸೂಡಿ, ಯಲ್ಲಪ್ಪ ಹದ್ರಾಳ, ಛತ್ರಪ್ಪ ಛಲವಾದಿ, ಸುರೇಶ ನಡುಲಮನಿ, ಪ್ರಕಾಶ ಮಾಲಿಪಾಟೀಲ್, ಆದೇಶ ರೊಟ್ಟಿ, ಭೀಮಣ್ಣ ನಡುಲಮನಿ, ಮಾರುತಿ ಯಡಿಯಾಪುರ, ಅಚ್ಚಪ್ಪ ನಾಯಕ, ಸೀನಪ್ಪ ಚವ್ಹಾಣ್, ಹನುಮಂತ ಭಜಂತ್ರಿ, ಪರಶುರಾಮ ಸಂಗನಾಳ, ಯಮನೂರಪ್ಪ ನಡುಲಮನಿ ಇತರರಿದ್ದರು.