

ಬೆಂಗಳೂರಿನಿಂದ ಯಾದಗಿರಿಗೆ ನಡೆದುಕೊಂಡೇ ಹೊರಟಿದ್ದಾರೆ ಜನ | ಬೇವೂರು ಬಳಿ ಆರಕ್ಷಕರಿಂದ ಆರೈಕೆ
ಯಲಬುರ್ಗಾ: ಕೆಲಸಕ್ಕಾಗಿ ಬೆಂಗಳೂರಿಗೆ ವಲಸೆ ಹೋಗಿದ್ದ ಯಾದಗಿರಿಯ 80 ಜನ ಬಾಡಿಗೆ ಲಾರಿ ಮೂಲಕ ಸ್ವಗ್ರಾಮಕ್ಕೆ ಬರಲು ಅನುಮತಿ ನೀಡದ ಕಾರಣ, ಅವರು ತಮ್ಮೂರು ತಲುಪುತ್ತಿಲ್ಲ. ಹೀಗಾಗಿ ದಾರಿ ಮಧ್ಯೆ ಅನ್ನ, ನೀರು ಕಾಣದ ಪರಿತಪಿಸುತ್ತಿರುವುದನ್ನು ಗಮನಿಸಿದ ಬೇವೂರಿನ ಆರಕ್ಷರು ಸೋಮವಾರ ಊಟದ ವ್ಯವಸ್ಥೆ ಮಾಡಿ, ಸಂತೈಸಿದ್ದಾರೆ.
ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಯಾದಗಿರಿ ಹೊರಟಿದ್ದ ಇವರಿಗೆ ಪಾದಯಾತ್ರೆಯೇ ಗತಿಯಾಗಿದೆ. ಊಟ, ನೀರು ಸಿಗದೇ ಉಪವಾಸ ಸಾಗುತ್ತ ಸ್ವಗ್ರಾಮ ತಲುಪಲು ಯತ್ನಿಸುತ್ತಿದ್ದಾರೆ. ಆದರೆ, ಊರು ಮುಟ್ಟಲು ಆಗುತ್ತಿಲ್ಲ. ಹೋಟೆಲ್, ಅಂಗಡಿ ಸಂಪೂರ್ಣ ಬಂದ್ ಆಗಿದ್ದರಿಂದ ಉಪವಾಸವೇ ಗತಿಯಾಗಿದೆ. ಹೊಸಪೇಟೆ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಳಿ ಗುನ್ನಾಳ ಗ್ರಾಮದ ಹತ್ತಿರ ಇವರು ಬರುತ್ತಿದ್ದಾರೆ ಎಂಬ ಸುದ್ದಿ ತಿಳಿದ ಬೇವೂರು ಪಿಎಸ್‌ಐ ಶಂಕರ ನಾಯಕ್ ಹಾಗೂ ಸಿಬ್ಬಂದಿ ಉಪ್ಪಿಟ್ಟು, ಪಲಾವ್ ಮಾಡಿಸಿ, ಉಣಬಡಿಸಿದ್ದಾರೆ.
ನಮ್ಮನ್ನ ಊರಿಗೆ ಕಳಿಸ್ರಿ…: ಸಾಹೇಬ್ರೆ ಎರಡು ದಿನಗಳಿಂದ ಅನ್ನ ನೀರು ಕಂಡಿಲ್ಲ. ಊರಿಗೆ ತೆರಳಲು ಲಾರಿಯನ್ನು ಬಿಡದೇ ಹಿಂದಕ್ಕೆ ಕಳಿಸುತ್ತಿದ್ದಾರೆ. ಮಕ್ಕಳೊಂದಿಗೆ ಬಂದ ನಮ್ಮ ಗತಿಯೇನ್ರಿ. ನಾವು ನಮ್ಮೂರಿಗೆ ಹೋಗ್ಬೇಕು. ಹೇಗಾದ್ರೂ ಮಾಡಿ ಕಳಿಸಿಕೊಡ್ರಿ ಎಂದು ಪೊಲೀಸರ ಮುಂದೆ ಗೋಳಿಟ್ಟಿದ್ದಾರೆ.
ಬೆಂಗಳೂರಿಗೆ ಗುಳೆ ಹೋಗಿದ್ದ ಯಾದಗಿರಿ ಜನ ಬಾಡಿಗೆ ಲಾರಿ ಮಾಡಿಕೊಂಡು ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು. ಲಾಕ್‌ಡೌನ್ ಆದೇಶ ಇರುವುದರಿಂದ ಲಾರಿಯನ್ನು ಎಲ್ಲೂ ಬಿಟ್ಟಿರಲಿಲ್ಲ. ಆದ್ದರಿಂದ ವಲಸಿಗರು ಎರಡು ದಿನದಿಂದ ಅನ್ನ ನೀರು ಕಂಡಿಲ್ಲ ಅಂತ ಅಳುತ್ತಿದ್ದರು. ಹೀಗಾಗಿ ಅವರ ಅಸಹಾಯಕತೆ ಕಂಡು ನೋಡಲಾಗದೇ ನಮ್ಮ ಠಾಣೆಯಿಂದ ಅವರಿಗೆ ಊಟದ ವ್ಯವಸ್ಥೆ ಮಾಡಿಸಿದ್ದೇವೆ. ಜಾಗ್ರತೆ ವಹಿಸಿ, ಊರಿಗೆ ತೆರಳಲು ಸೂಚಿಸಿದ್ದೇವೆ. | ಶಂಕರ ನಾಯಕ್ ಬೇವೂರು ಠಾಣೆ ಪಿಎಸ್‌ಐ