

ಯಲಬುರ್ಗಾ: ಎಚ್‌ಐವಿ ಏಡ್ಸ್ ಮಾರಕ ಕಾಯಿಲೆಯಾಗಿದ್ದು, ಅದರ ಹರಡುವಿಕೆಯಿಂದ ಎಲ್ಲರೂ ದೂರ ಇರಬೇಕು ಎಂದು ಆಡಳಿತ ವೈದ್ಯಾಧಿಕಾರಿ ರಮೇಶ ಜಾದವ್ ಹೇಳಿದರು.
ತಾಲೂಕಿನ ಗಾಣಧಾಳ ಗ್ರಾಮದಲ್ಲಿ ಗ್ರಾಪಂ, ಆರೋಗ್ಯ ಕೇಂದ್ರ, ಸಂಪರ್ಕ ಕಾರ್ಯಕರ್ತರ ಯೋಜನೆ ಹಾಗೂ ಹೊಸ ಬೆಳಕು ನೆಟ್ವರ್ಕ್ ಆಫ್ ಪಾಸಿಟಿವ್ ಪೀಪಲ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಎಚ್‌ಐವಿ ಏಡ್ಸ್ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಸುರಕ್ಷಿತ ಲೈಂಗಿಕ ಸಂಪರ್ಕ, ರಕ್ತದ ಮಾದರಿ ಸ್ವೀಕರಿಸುವುದು, ಬಳಸಿದ ಸಿರಿಂಜ್‌ನಿಂದ ಏಡ್ಸ್ ಹರಡುವ ಲಕ್ಷಣಗಳಿರುತ್ತವೆ. ಇವುಗಳ ಬಗ್ಗೆ ಎಚ್ಚರ ವಹಿಸಬೇಕು. ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು. ಎಚ್‌ಐವಿ ಲಕ್ಷಣಗಳು ಕಂಡು ಬಂದರೆ ರಕ್ತ ಪರೀಕ್ಷೆ ಮಾಡಿಸಿಕೊಂಡು ಖಚಿತಪಡಿಸಿಕೊಳ್ಳಬೇಕು. ಸರ್ಕಾರಗಳು ಮಾರಕ ಕಾಯಿಲೆ ಹರಡದಂತೆ ತಡೆಯಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು. ಕಾರ್ಯಕ್ರಮದಲ್ಲಿ 67 ಜನ ಐಸಿಟಿಸಿ ಪರೀಕ್ಷೆ ಮಾಡಿಸಿಕೊಂಡರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮುತ್ತಯ್ಯ ವಸ್ತ್ರದ, ಪ್ರಯೋಗ ಶಾಲಾ ತಂತ್ರಜ್ಞ ವೀರೇಶಕುಮಾರ, ಐಸಿಟಿಸಿ ಆಪ್ತ ಸಮಾಲೋಚಕ ಬಾಳಪ್ಪ ಕಂದಕೂರ, ಪಿಎಚ್‌ಸಿಒ ಮಂಜುಳಾ ಹಟ್ಟಿ, ಸಿಎಸ್ ಅಶ್ವಿನಿ, ಹೊಸ ಬೆಳಕು ಯೋಜನೆ ಮೇಲ್ವಿಚಾರಕ ಮುತ್ತಣ್ಣ ಬಾದಿಮನಾಳ, ಲಿಂಕ್‌ವರ್ಕರ್ ಡಿ.ರವಿ, ಆಸೀಫ್‌ಬೇಗಂ, ಸುವರ್ಣಾ, ಆಶಾ ಕಾರ್ಯಕರ್ತೆಯರು ಇದ್ದರು.