

ಯಲಬುರ್ಗಾ: ದೈಹಿಕ-ಮಾನಸಿಕ ಬಲವರ್ಧನೆಗೆ ಕ್ರೀಡೆ ಸಹಕಾರಿ. ವಿಶೇಷವಾಗಿ ಹಿರೇಮ್ಯಾಗೇರಿಯಲ್ಲಿ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ತಾಪಂ ಇಒ ಸಂತೋಷ ಪಾಟೀಲ್ ಹೇಳಿದರು.
ಹಿರೇಮ್ಯಾಗೇರಿ ಸಹಿಪ್ರಾ ಶಾಲಾವರಣದಲ್ಲಿ ಮಂಗಳವಾರ ಯಲಬುರ್ಗಾ-ಕುಕನೂರು ಅವಳಿ ತಾಲೂಕುಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಯಿಂದ ಉತ್ತಮ ಆರೋಗ್ಯ ಮತ್ತು ಸದೃಢ ದೇಹ ಸಾಧ್ಯ. ಕ್ರೀಡಾಪಟುಗಳು ಆಟದಲ್ಲಿ ಸೋಲು-ಗೆಲುವು ಸಮನಾಗಿ ಸ್ವೀಕರಿಸಬೇಕು ಎಂದರು.
ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಮಾತನಾಡಿ, ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಯುವಕರು ಗ್ರಾಮಕ್ಕೆ ಕೀರ್ತಿ ತರುವಂಥ ಕೆಲಸ ಮಾಡಿರುವುದು ಖುಷಿ ವಿಚಾರ. ಕ್ರೀಡೆಗಳಲ್ಲಿ ಶ್ರದ್ಧೆ, ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯವಿದೆ. ಕಲಿಕೆ ಜತೆಗೆ ಕ್ರೀಡೆಗೆ ಮಕ್ಕಳು ಒತ್ತು ನೀಡಬೇಕು ಎಂದರು.
ಗ್ರಾಪಂ ಅಧ್ಯಕ್ಷ ನಿಂಗಪ್ಪ ವೀರಾಪುರ, ಪ್ರಮುಖರಾದ ಮಹಾಂತೇಶ ಗಾಣಿಗೇರ್, ರಾಯಪ್ಪ ಮಾಡ್ಲಗೇರಿ, ಗುರಪ್ಪ ಅಂಗಡಿ, ಬಸವರಾಜ ರಾಮಶೆಟ್ಟಿ, ನೀಲಪ್ಪ ಕೆಂಪಣ್ಣವರ, ನಿಂಗಪ್ಪ ದೇವರಗುಡಿ, ರಮೇಶ ಕೊಣ್ಣೂರು, ಲಿಂಗರಾಜ ಹೊಸಮನಿ, ಹಸನ್‌ಸಾಬ್ ನದಾಫ್, ಹನುಮಗೌಡ ಮಾಲಿಪಾಟೀಲ್, ಎಸ್.ವಿ.ಧರಣಾ, ಪಿಡಿಒ ರತ್ನಮ್ಮ ಗುಂಡಣ್ಣವರ್, ಬಿಆರ್‌ಸಿ ಅಶೋಕ ಗೌಡರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಜೆ.ದಾನಿ, ದೈಹಿಕ ಶಿಕ್ಷಣಾಧಿಕಾರಿ ವೀರಭದ್ರಪ್ಪ ಅಂಗಡಿ, ಶರಣಪ್ಪ ವೀರಾಪುರ ಸೇರಿದಂತೆ ಮತ್ತಿತರರು ಇದ್ದರು.
ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡೆಯಲ್ಲಿ ಆಸಕ್ತಿ ವಹಿಸಬೇಕು. ಶಿಕ್ಷಣ ಕಲಿಕೆ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಮಕ್ಕಳ ದೈಹಿಕ ಬೆಳವಣಿಗೆಗೆ ಕ್ರೀಡೆ ಪೂರಕವಾಗಿದೆ.
ಸೋಮಶೇಖರಗೌಡ ಪಾಟೀಲ್
ಬಿಇಒ ಯಲಬುರ್ಗಾ.