

ಯಲಬುರ್ಗಾ: ಹಡಪದ ಅಪ್ಪಣ್ಣ 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು ಎಂದು ಉಪನ್ಯಾಸಕ ಬಸವರಾಜ ಕೊಂಡಗುರಿ ಹೇಳಿದರು.
ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಉಪನ್ಯಾಸ ನೀಡಿದರು.
ಅಪ್ಪಣ್ಣ , ಬಸವಣ್ಣನವರ ಬಾಲ್ಯದ ಒಡನಾಡಿ ಅಲ್ಲದೇ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು. ವಿಶ್ವದ ಪ್ರಪ್ರಥಮ ಸಂಸತ್ ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣಗೆ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿರುವುದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ ಎಂದರು.
ಅಪ್ಪಣ್ಣ ಪ್ರಿಯ ಚನ್ನಬಸವಣ್ಣ ಎಂಬ ಅಂಕಿತನಾಮದಿಂದ 250ಕ್ಕೂ ಹೆಚ್ಚು ವಚನಗಳನ್ನು ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರಿಗೆ ಅಪ್ಪಣ್ಣ ಪ್ರಾಣವೇ ಆಗಿದ್ದರೆಂಬುದಕ್ಕೆ ಕಲ್ಯಾಣಕ್ರಾಂತಿಯ ಕೊನೆಯ ದಿನಗಳಿಂದ ತಿಳಿದು ಬರುತ್ತದೆ. ಒಬ್ಬ ಕಾರ್ಯದರ್ಶಿ ಹೇಗೆ ಕಾರ್ಯನಿರ್ವಹಿಸಬೇಕೆಂಬುದಕ್ಕೆ ಅಪ್ಪಣ್ಣ ಉತ್ತಮ ಉದಾಹರಣೆಯಾಗಿದ್ದಾರೆ. ಅವರ ಜೀವನದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಯಾಗಬೇಕಾಗಿದೆ ಎಂದರು.
ಇದಕ್ಕೂ ಮೊದಲು ಬೇವೂರು ರಸ್ತೆಯ ಹಡಪದ ಹಪ್ಪಣ್ಣ ವೃತ್ತದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ನಂತರ ಪಟ್ಟಣದ ಮೊಗ್ಗಿ ಬಸವೇಶ್ವರ ದೇವಸ್ಥಾನದಿಂದ ಅಪ್ಪಣ್ಣ ಭಾವಚಿತ್ರ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ಕುಂಭ-ಕಳಸ ವಿವಿಧ ವಾದ್ಯಗಳು ಮೆರವಣಿಗೆಗೆ ಮೆರುಗು ತಂದವು.
ಗ್ರೇಡ್-2 ತಹಸೀಲ್ದಾರ್ ವೀರುಪಣ್ಣ ಹೊರಪೇಟಿ, ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಮುಖ್ಯಾಧಿಕಾರಿ ನಾಗೇಶ, ತೋಟಗಾರಿಕೆ ಇಲಾಖೆ ಅಧಿಕಾರಿ ಲಿಂಗನಗೌಡ ಪಾಟೀಲ, ಶಿಕ್ಷಣವ ಇಲಾಖೆಯ ವೀರಭದ್ರಪ್ಪ ಅಂಗಡಿ, ಮುಖಂಡರಾದ ಶೇಖರಗೌಡ ಉಳ್ಳಾಗಡ್ಡಿ, ವೀರಣ್ಣ ಹುಬ್ಬಳ್ಳಿ, ಸಂಗಣ್ಣ ತೆಂಗಿನಕಾಯಿ, ಪಪಂ ಸದಸ್ಯರಾದ ಡಾ.ನಂದಿತಾ ದಾನರಡ್ಡಿ, ರೇವಣೆಪ್ಪ ಹಿರೇಕುರುಬರ, ಹನುಮಂತಪ್ಪ ಭಜಂತ್ರಿ, ಶಿವಪ್ಪ ಶಾಸ್ತ್ರಿ, ಹಂಪಣ್ಣ ಹಡಪದ, ಹಡಪದ ಸಮಾಜದ ತಾಲೂಕು ಅಧ್ಯಕ್ಷ ವೀರಣ್ಣ ಹಡಪದ ಹಾಗೂ ಸಮಾಜದ ಅನೇಕ ಮುಖಂಡರು ಹಾಜರಿದ್ದರು.