

ಯಲಬುರ್ಗಾ: ಮಗುವಿಗೆ ತಾಯಿಹಾಲು ಅಮೃತ ಸಮಾನ ಎಂದು ಸ್ತ್ರೀರೋಗ ತಜ್ಞ ಡಾ.ಮಹಾಂತೇಶ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಗು ದೈಹಿಕ ಮತ್ತು ಮಾನಸಿಕವಾಗಿ ಬೆಳವಣಿಗೆ ಹೊಂದಲು ಪ್ರಕೃತಿದತ್ತವಾಗಿ ತಾಯಿಹಾಲು ವರದಾನವಾಗಿದೆ. ತಾಯಿಹಾಲು ಪರಿಶುದ್ಧ ಮತ್ತು ರೋಗಾಣು ರಹಿತವಾಗಿದೆ. ಮಗುವಿಗೆ ರೋಗ ಬಾರದಂತೆ ತಡೆಯುತ್ತದೆ. ಆದ್ದರಿಂದ ಎಲ್ಲರೂ ಸ್ತನ್ಯಪಾನಕ್ಕೆ ಪ್ರೋತ್ಸಾಹಿಸಬೇಕು ಎಂದರು.
ಡಾ.ಶೇಖರ ಭಜಂತ್ರಿ ಮಾತನಾಡಿ, ತಾಯಂದಿರು ಮಗುವಿಗೆ ಹಾಲನ್ನು ನೀಡುವಾಗ ಸರಿಯಾದ ಕ್ರಮ ಅನುಸರಿಸಬೇಕು ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿಯಬೇಕು ಎಂದರು. ಆಪ್ತ ಸಮಾಲೋಚಕ ಶರಣಪ್ಪ ಉಪ್ಪಾರ ಪ್ರತಿಜ್ಞಾವಿಧಿ ಬೋಧಿಸಿದರು. ಡಾ.ಸೌಭಾಗ್ಯ, ಸಿಬ್ಬಂದಿ ಪ್ರಕಾಶ ಬಿಕ್ಷಾವತಿಮಠ, ಬಸವರಾಜ ಹಡಪದ, ಕಸ್ತೂರಿ, ಮಧುಮತಿ, ವೀಣಾ, ಶಿವು ಇತರರಿದ್ದರು.