ದ್ರಾಕ್ಷಿಬೆಳೆಗೆ ಡೌನಿಮೀಲ್ಡ್ ಕಾಟ ; ಚಿಂತೆಗೀಡಾದ ಬೆಳೆಗಾರರು

Yalaburga grape crop loss
ಯಲಬುರ್ಗಾ ತಾಲೂಕಿನ ವಣಗೇರಿ ರೈತ ಅಮರೇಶಪ್ಪ ಬೆಲ್ಲದ ಜಮೀನಲ್ಲಿ ಬೆಳೆಯಲಾದ ದ್ರಾಕ್ಷಿಗೆ ಡೌನಿಮೀಲ್ಡ್ ರೋಗ ಆವರಿಸಿರುವುದು.
Published on


ಪಾಲಾಕ್ಷ ಬಿ. ತಿಪ್ಪಳ್ಳಿ


ಯಲಬುರ್ಗಾ: ಮೋಡ ಕವಿದ ವಾತಾವರಣ ಹಾಗೂ ಇತ್ತೀಚಿಗೆ ಸುರಿದ ಮಳೆಯಿಂದಾಗಿ ದ್ರಾಕ್ಷಿ ಬೆಳೆಗೆ ಡೌನಿಮೀಲ್ಡ್ ರೋಗ ಆವರಿಸಿದ್ದು, ತಾಲೂಕಿನ ರೈತರಿಗೆ ಇಳುವರಿ ಕುಸಿತ ಭೀತಿ ಎದುರಾಗಿದೆ.

ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ 150 ರೈತರು ಅಂದಾಜು 315 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದಾರೆ. ತಾಲೂಕಿನ ಮಸಾರಿ ಭಾಗದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಮೋಡ ಕವಿದ ವಾತಾವರಣ ಮತ್ತು ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗೆ ಡೌನಿಮೀಲ್ಡ್ ರೋಗ ಆವರಿಸುತ್ತಿದೆ. ರೈತರು ಲಕ್ಷಗಟ್ಟಲೆ ಖರ್ಚು ಮಾಡಿ ಔಷಧ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದ ಬೆಳೆಗಾರರು ಇಳುವರಿ ಕುಸಿತ ಭೀತಿ ಎದುರಿಸುವಂತಾಗಿದೆ. ಸಾಮಾನ್ಯವಾಗಿ ದ್ರಾಕ್ಷಿ ಬಳ್ಳಿಗಳನ್ನು ಅಕ್ಟೋಬರ್ ತಿಂಗಳಲ್ಲಿ ಚಾಟ್ನಿ ಮಾಡಲಾಗುತ್ತದೆ. ಕೆಲ ರೈತರು ಒಂದು ವಾರ ಮುಂಚಿತವಾಗಿ ಚಾಟ್ನಿ ಮಾಡಿದ್ದರಿಂದ ಮತ್ತು ಮೋಡ ಕವಿದ ವಾತಾವರಣದಿಂದಾಗಿ ರೋಗ ಆವರಿಸುತ್ತಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ದ್ರಾಕ್ಷಿ ಬೆಳೆಗೆ ಆವರಿಸುತ್ತಿರುವ ರೋಗ ನಿಯಂತ್ರಣಕ್ಕೆ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ಸಲಹೆ ನೀಡಬೇಕು. ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಯುವುದು, ನಿರ್ವಹಣೆ ಮತ್ತು ರೋಗ ನಿಯಂತ್ರಣ ಕುರಿತು ನಿರ್ದೇಶನ ನೀಡಲು ಒಬ್ಬ ವಿಜ್ಞಾನಿ ಅವಶ್ಯಕತೆ ಇದೆ ಎನ್ನುತ್ತಾರೆ ಹುಣಸಿಹಾಳದ ದ್ರಾಕ್ಷಿ ಬೆಳೆಗಾರ ವಿಜಯಗೌಡ ಕೆಂಚಮ್ಮನವರ್.

ಬಹುತೇಕ ದ್ರಾಕ್ಷಿ ಬೆಳೆಗಾರರು ಅಕ್ಟೋಬರ್‌ನಲ್ಲಿ ಚಾಟ್ನಿ ಮಾಡಲು ಪ್ರಾರಂಭಿಸುತ್ತಾರೆ. ಹವಾಮಾನ ವೈಪರೀತ್ಯ ಹಾಗೂ ಮಳೆಯಿಂದಾಗಿ ಡೌನಿಮೀಲ್ಡ್ ರೋಗ ಆವರಿಸುವ ಭೀತಿ ಶುರುವಾಗಿದೆ. ಒಂದೆಡೆ ಮುಂಗಾರು ಆಶಾದಾಯಕವಾಗಿದ್ದು, ನಾನಾ ಬೆಳೆಗಳು ಉತ್ತಮವಾಗಿ ಬಂದಿದೆ. ಇದರಿಂದ ರೈತರು ಸಂತಸಗೊಂಡಿದ್ದಾರೆ. ಇನ್ನೊಂದೆಡೆ ದ್ರಾಕ್ಷಿ ಬೆಳೆಗೆ ಡೌನಿಮೀಲ್ಡ್ ರೋಗ ಬಾಧಿಸಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ದ್ರಾಕ್ಷಿ ಬೆಳೆಯನ್ನು ಒಟ್ಟು 7 ಎಕರೆಯಲ್ಲಿ ಬೆಳೆಯಲಾಗುತ್ತಿದೆ. ಈಗ 2 ಎರಡು ಎಕರೆ ಚಾಟ್ನಿ ಮಾಡಲಾಗಿದೆ. ದ್ರಾಕ್ಷಿಗೆ ಡೌನಿಮೀಲ್ಡ್ ರೋಗ ಆವರಿಸಿದ್ದು, ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ದ್ರಾಕ್ಷಿ ಕಾಯಿಗಳ ಗೊಂಚಲನ್ನು ಕಟಾವು ಮಾಡಿ ಹೊರ ಹಾಕಲಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳಿದ ಔಷಧ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದ ಸಂಕಷ್ಟ ಎದುರಾಗಿದೆ.| ಅಮರೇಶಪ್ಪ ಬೆಲ್ಲದ ದ್ರಾಕ್ಷಿ ಬೆಳೆಗಾರ, ವಣಗೇರಿ

ಸಾಮಾನ್ಯವಾಗಿ ದ್ರಾಕ್ಷಿ ಬಳ್ಳಿಯನ್ನು ಅಕ್ಟೋಬರ್ ತಿಂಗಳಲ್ಲಿ ಚಾಟ್ನಿ ಮಾಡಬೇಕು. ಕೆಲ ರೈತರು ಮುಂಗಡವಾಗಿ ಚಾಟ್ನಿ ಮಾಡಿದ್ದರಿಂದ ಹಾಗೂ ಹವಾಮಾನ ವೈಪರೀತ್ಯದಿಂದ ಡೌನಿಮೀಲ್ಡ್ ರೋಗ ಆವರಿಸಿದೆ. ನಿಯಂತ್ರಣಕ್ಕೆ ರೈತರ ಜಮೀನುಗಳಿಗೆ ಭೇಟಿ ನೀಡಿ ಸಲಹೆ ನೀಡಲಾಗುತ್ತಿದೆ. ಕೆಲ ರೈತರ ಬೆಳೆಗೆ ಮಾತ್ರ ಡೌನಿ ರೋಗ ಆವರಿಸಿದೆ.| ನಿಂಗನಗೌಡ ಪಾಟೀಲ್ , ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ, ಯಲಬುರ್ಗಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net