ಶಾಸಕರ ಅನುದಾನದಲ್ಲಿ ಪರಿಹಾರ ನೀಡಲು ಒತ್ತಾಯ

291120 Yalaburga State Private Teachers Appeal
ಯಲಬುರ್ಗಾದಲ್ಲಿ ಶಾಸಕ ಹಾಲಪ್ಪ ಆಚಾರ್‌ಗೆ ರಾಜ್ಯ ಖಾಸಗಿ ಶಿಕ್ಷಕರ ಬಳಗದ ತಾಲೂಕು ಘಟಕದಿಂದ ಭಾನುವಾರ ಮನವಿ ಸಲ್ಲಿಸಲಾಯಿತು.
Published on

ಯಲಬುರ್ಗಾ: ಖಾಸಗಿ ಶಾಲಾ ಕಾಲೇಜಿನ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಶಾಸಕರ ಅನುದಾನದಲ್ಲಿ ಪರಿಹಾರ ಅಥವಾ ಆಹಾರದ ಕಿಟ್ ವಿತರಣೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ತಾಲೂಕು ಘಟಕದಿಂದ ಶಾಸಕ ಹಾಲಪ್ಪ ಆಚಾರ್‌ಗೆ ಭಾನುವಾರ ಮನವಿ ಸಲ್ಲಿಸಲಾಯಿತು.

ಸಂಘದ ತಾಲೂಕು ಅಧ್ಯಕ್ಷ ಮಹೇಶ ಪಟ್ಟೇದ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 250ಕ್ಕೂ ಅಧಿಕ ಖಾಸಗಿ ಶಾಲಾ, ಕಾಲೇಜು ಶಿಕ್ಷಕರು ಹಾಗೂ ಉಪ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರೊನಾ ಮಹಾಮಾರಿಯಿಂದ ಕಳೆದ ಒಂಬತ್ತು ತಿಂಗಳಿಂದ ಯಾವುದೇ ಕೆಲಸವಿಲ್ಲದೆ ಸಂಕಷ್ಟದಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ಸರ್ಕಾರವಾಗಲಿ, ಆಡಳಿತ ಮಂಡಳಿಗಳಾಗಲಿ ಇಲ್ಲಿಯವರೆಗೆ ಕನಿಷ್ಠ ಸಾಂತ್ವನದ ಮಾತು ಹೇಳದಿರುವುದು ಖೇದದ ಸಂಗತಿ.

ಕೆಲಸ ವೇತನವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಇಷ್ಟಾದರೂ ಯಾವುದೇ ಹೋರಾಟ, ಸಂಘಟನೆ ಮಾಡದೆ ಯಾರಾದರೂ ಪರಿಹಾರ ನೀಡಬಹುದು, ಬೇರೆಯವರಂತೆ ನಮ್ಮನ್ನೂ ಪರಿಗಣಿಸಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಯಾರೂ ನಮ್ಮ ಸಮಸ್ಯೆಗಳನ್ನು ಆಲಿಸುವುದಾಗಲಿ, ಅದಕ್ಕೆ ಪರಿಹಾರವನ್ನು ನೀಡುವುದಾಗಲಿ ಮಾಡಲಿಲ್ಲ. ಈ ಕುರಿತು ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ತಾವುಗಳು ನಮ್ಮ ಕೋರಿಕೆಯನ್ನು ಆಲಿಸಿ ಪರಿಹಾರ ಅಥವಾ ಆಹಾರ ಕಿಟ್ ವಿತರಿಸುವಂತೆ ಮನವಿ ಮಾಡಿದರು.

ಸಂಘದ ಜಿಲ್ಲಾಧ್ಯಕ್ಷ ವಿ.ಎಚ್.ಗುಳಕಿಗೌಡ್ರ, ಪದಾಧಿಕಾರಿಗಳಾದ ಶಿವುಕುಮಾರ ಕುಂಬಾರ್, ಕುಮಾರಗೌಡ ಪಾಟೀಲ್, ಅನಿಲ್ ಪವಾರ್, ಹನುಮಂತಪ್ಪ ಪುರದ, ರಾಜು ನದಾಫ್, ರಮೇಶ ಪತ್ತಾರ, ಶಿವಕುಮಾರ ಹಿರೇಮಠ, ಯಮನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net