

ಯಲಬುರ್ಗಾ: ಜಗತ್ತಿನಲ್ಲಿ ಬಿಜೆಪಿ ಅತೀ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷವಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ವಿಕಸಿತ ಮತ್ತು ಬಲಿಷ್ಠ ಭಾರತಕ್ಕಾಗಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರದ ದಕ್ಷ ಆಡಳಿತದಿಂದ ದೇಶಕ್ಕೆ ದೊಡ್ಡ ಲಾಭವಾಗಿದೆ.
ಭಾರತ ದೇಶ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಭವ್ಯ ಭಾರತ ನಿರ್ಮಾಣ ಮಾಡುವ ಕನಸು ನನಸು ಮಾಡುವಲ್ಲಿ ಮೋದಿ ಅವರು ಶ್ರಮಿಸುತ್ತಿದ್ದಾರೆ. ಅವರ ಹತ್ತು ವರ್ಷ ಆಡಳಿತದಲ್ಲಿ ನೂರಾರು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದಾರೆ. ದೇಶದ ಪ್ರತಿ ಪ್ರಜೆಗೆ ಸರ್ಕಾರದ ಯೋಜನೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ ಎಂದರು.
ಬಿಜೆಪಿ ಕಾರ್ಯಕರ್ತರು ಪಕ್ಷವಾಗಿದೆ. ಪ್ರತಿಯೊಬ್ಬರೂ ಪಕ್ಷದ ಸದಸ್ಯತ್ವ ಪಡೆದು ಮೋದಿ ಕೈಬಲ ಪಡಿಸಬೇಕು. ಕಾರ್ಯಕರ್ತರ ನಿಸ್ವಾರ್ಥ ಪರಿಶ್ರಮದಿಂದ ಕೇಂದ್ರದಲ್ಲಿ ಮೂರನೇ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಪರಿಗಣಿಸಿದೆ ಎಂದರು. ಇದೇ ವೇಳೆ ಅಂಗಡಿ, ಮನೆ ಮನೆಗೆ ತೆರಳಿ ಡಿಜಿಟಲ್ ಮೊಬೈಲ್ ಮೂಲಕ ಸದಸ್ಯತ್ವ ನೋಂದಣಿ ಕಾರ್ಯ ಮಾಡಲಾಯಿತು.
ಪ್ರಮುಖರಾದ ಬಸಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಸಿ.ಎಚ್.ಪಾಟೀಲ್, ಶರಣಪ್ಪ ಈಳಿಗೇರ್, ಅಮರೇಶ ಹುಬ್ಬಳ್ಳಿ, ಮಹೇಶ ಭೂತೆ, ಶಿವಕುಮಾರ ನಾಗಲಾಪುರಮಠ, ಸಿದ್ರಾಮೇಶ ಬೇಲೇರಿ, ಕಲ್ಲಪ್ಪ ಕರಮುಡಿ, ಸಂತೋಷಿಮಾ ಜೋಶಿ, ಶಂಕರ ಭಾವಿಮನಿ, ಹನುಮಂತ ರಾಠೋಡ, ಮಲ್ಲಪ್ಪ ಸುರಕೋಡ, ಪರಶುರಾಮ ಚವ್ಹಾಣ, ಚಂದ್ರು ಮರದಡ್ಡಿ, ಈರಪ್ಪ ಬಣಕಾರ, ಶ್ರೀಕಾಂತ ಛಲವಾದಿ, ಬಸಯ್ಯ ಮೈಸೂರಮಠ, ನವೀನ ಮಾಟೂರು, ರಮೇಶ ಬಣಕಾರ ಶರಣಪ್ಪ ಖಾನಾವಳಿ ಇತರರಿದ್ದರು.