

ಯಲಬುರ್ಗಾ: ಜನಸೇವೆ ಮತ್ತು ಅಭಿವೃದ್ಧಿ ಚಿಂತನೆ ಇಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೇನೆಯೇ ಹೊರತು ಹಣ, ಅಧಿಕಾರದ ಆಸೆಗೆ ಬಂದಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಗಾಣಧಾಳ ಗ್ರಾಮದಲ್ಲಿ ಬ್ಲಾಕ್ ಕಾಂಗ್ರೆಸ್ ಶನಿವಾರ ಹಮ್ಮಿಕೊಂಡಿದ್ದ ಅಭಿವೃದ್ಧಿಯ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು ಶಾಸಕನಾಗಿದ್ದಾಗ ಅಭಿವೃದ್ಧಿಗೆ ಸಂಬಂಧಿಸಿ ಕ್ಷೇತ್ರದ ಜನತೆಗೆ ಅನ್ಯಾಯ ಮಾಡಿಲ್ಲ. ನಿಸ್ವಾರ್ಥದಿಂದ ಕೆಲಸ ಮಾಡಿದ್ದೇನೆ. ಹಣದ ರಾಜಕಾರಣ ಆರಂಭಿಸಿದ್ದು ಬಿಜೆಪಿ. ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಏನೂ ಕೆಲಸ ಆಗಿಲ್ಲ ಎನ್ನುವುದು ಕಟು ಸತ್ಯ. ಇದನ್ನು ಯುವಜನತೆ ಅರಿತುಕೊಳ್ಳಬೇಕು. ಬಿಜೆಪಿಯವರು ಒಂದೇ ಒಂದು ಅಣೆಕಟ್ಟೆ ಕಟ್ಟಿದ್ದಾರಾ? ಜನರನ್ನು ಭಾವನಾತ್ಮಕವಾಗಿ ಸೆಳೆದು ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.
ನೀರಾವರಿ ಹೆಸರಿನ ಮೇಲೆ ಅಧಿಕಾರಕ್ಕೆ ಬಂದವರು ಈಗ ಕೆರೆ ತುಂಬಿಸುವ ಯೋಜನೆ ಎನ್ನುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಗೆ ಬಂದ ಕೆರೆ ತುಂಬಿಸುವ ಯೋಜನೆ ನಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಜನರಿಗೆ ಮೋಸ ಮಾಡುವ ತಂತ್ರವಾಗಿದೆ. ಇದನ್ನೆಲ್ಲ ಜನತೆ ಗಮನಿಸುತ್ತಿದ್ದಾರೆ. ನೀರಾವರಿ ಬಗ್ಗೆ ಸಚಿವ ಹಾಲಪ್ಪ ಆಚಾರ್ ವಿಧಾನಸೌಧದಲ್ಲಿ ಧ್ವನಿ ಎತ್ತಿದ್ದಾರಾ ಎಂದು ಪ್ರಶ್ನಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸುಕ್ಷೇತ್ರ ಚಿಕ್ಕವಂಕಲಕುಂಟಾದ ಮಾರುತೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಉಳಾಗಡ್ಡಿ, ಹನಮಂತಗೌಡ ಚಂಡೂರು, ಪ್ರಮುಖರಾದ ಯಂಕಣ್ಣ ಯರಾಶಿ, ರಾಘಣ್ಣ ಗುನ್ನಾಳ, ಮಹೇಶ ಹಳ್ಳಿ, ಚಿದಾನಂದಪ್ಪ ಹರಕಂಗಿ, ಷಣ್ಮುಖಪ್ಪ ಬಳ್ಳಾರಿ, ರುದ್ರಪ್ಪ ಮರಕಟ್, ಅಯ್ಯಪ್ಪ ಗುಳೇದ, ಓಮಣ್ಣ ಚನ್ನದಾಸರ, ಎ.ಜಿ.ಭಾವಿಮನಿ, ಶಶಿಕಲಾ ಬಡಿಗೇರ್, ಸಾವಿತ್ರಿ ಗೊಲ್ಲರ, ಶರಣಮ್ಮ ಪೂಜಾರ, ಫರೀದಾಬೇಗಂ, ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಸುಧೀರ ಕೊರ್ಲಳ್ಳಿ, ಮಲ್ಲು ಜಕ್ಕಲಿ, ಬಸವರಾಜ ಈಳಿಗೇರ, ರೆಹಮನ್‌ಸಾಬ್ ನಾಯಕ, ಪ್ರಭು ಬಡಿಗೇರ, ಹನಮೇಶ ನಾಯಕ್, ಕೆ.ಬೀರಪ್ಪ, ಅಮರೇಶ ಕರಕಪ್ಪನವರ ಇತರರಿದ್ದರು.