ಫ್ಲೆಕ್ಸ್, ಬ್ಯಾನರ್ ರಾಜಕಾರಣಿ ನಾನಲ್ಲ; ರಾಯರೆಡ್ಡಿ ವಿರುದ್ಧ ಸಚಿವ ಹಾಲಪ್ಪ ಆಚಾರ್ ವಾಗ್ದಾಳಿ

02012021 Yelburga Halappa achar
Published on

ಯಲಬುರ್ಗಾ: ಕ್ಷೇತ್ರದ ಅಭಿವೃದ್ಧಿ ಹೆಸರಿನಲ್ಲಿ ಫ್ಲೆಕ್ಸ್, ಬ್ಯಾನರ್ ಮೂಲಕ ಪ್ರಚಾರ ಪಡೆದುಕೊಳ್ಳುವ ರಾಜಕಾರಣಿ ನಾನಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಪರೋಕ್ಷವಾಗಿ ಹರಿಹಾಯ್ದರು.

ಪಟ್ಟಣದ ಬಯಲು ರಂಗಮಂದಿರಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಪಪಂ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬಡ ಮಕ್ಕಳಿಗೆ ಶಿಕ್ಷಣ ಮತ್ತು ರೈತರ ಶ್ರೇಯೋಭಿವೃದ್ಧಿಯೇ ನನ್ನ ಗುರಿ. ಅಭಿವೃದ್ಧಿ ಹೆಸರಿನಲ್ಲಿ ಸುಳ್ಳು ಪ್ರಚಾರ ಪಡೆಯುವ ಜಾಯಮಾನ ನನ್ನದಲ್ಲ. ಐಷಾರಾಮಿ ಜೀವನ ನಡೆಸಲು, ನನ್ನ ಕುಟುಂಬದ ಉದ್ಧಾರಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ. ಜನರ ಮಧ್ಯೆ ಇದ್ದು, ಪ್ರಾಮಾಣಿಕ, ಪಾರದರ್ಶಕವಾಗಿ ಕೆಲಸ ಮಾಡಲು ಬಂದಿದ್ದೇನೆ ಎಂದರು.

ಹಿಟ್ ಆ್ಯಂಡ್ ರನ್ ನನ್ನ ಪಾಲಿಸಿ ಅಲ್ಲ. ನನ್ನ ಕೆಲಸದ ಜವಾಬ್ದಾರಿ ಬಗ್ಗೆ ಇನ್ನೊಬ್ಬರಿಂದ ಹೇಳಿಸಿಕೊಳ್ಳುವ ಅಗತ್ಯತೆ ನನಗಿಲ್ಲ. ಯಾರೇ ಆಗಲಿ ಮೊದಲು ನಾವು ಗೌರವ ಕೊಡುವುದನ್ನು ಕಲಿಯಬೇಕು. ಅಂದಾಗ ಮಾತ್ರ ನಮಗೆ ಗೌರವ ಸಿಗುತ್ತದೆ ಎನ್ನುವುದನ್ನು ಜನಪ್ರತಿನಿಧಿಗಳು ಮನವರಿಕೆ ಮಾಡಿಕೊಳ್ಳಬೇಕು ಎಂದರು. ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಎಂ.ಗಂಗಪ್ಪ, ತಹಸೀಲ್ದಾರ್ ಶ್ರೀಶೈಲ ತಳವಾರ್ ಮಾತನಾಡಿದರು. ಸಂಸದ ಸಂಗಣ್ಣ ಕರಡಿ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಉಪಾಧ್ಯಕ್ಷೆ ಶಾಂತಾ ಮಾಟುರು, ಸ್ಥಾಯಿ ಸಮಿತಿ ಅಧ್ಯಕ್ಷ ವಸಂತ ಬಾವಿಮನಿ, ಸಿಒ ಶಿವಕುಮಾರ ಕಟ್ಟಿಮನಿ, ಪ್ರಮುಖರಾದ ಬಸಲಿಂಗಪ್ಪ ಭೂತೆ, ಸಿ.ಎಚ್.ಪಾಟೀಲ್, ವೀರಣ್ಣ ಹುಬ್ಬಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net