ಪ್ರಾಯೋಗಿಕ ಕಲಿಕೆ ಹೆಚ್ಚು ಪರಿಣಾಮಕಾರಿ ಎಂದ ಜಿಪಂ ಸಿಇಒ ಫೌಜಿಯಾ ತರನ್ನುಮ್

240822 Talakeri ZP CEO Drives to Science Centre
ಯಲಬುರ್ಗಾ ತಾಲೂಕಿನ ತಾಳಕೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ದಾನಿಗಳ ನೆರವಿನಿಂದ ಸಿದ್ಧವಾದ ವಿಜ್ಞಾನ ಕೇಂದ್ರಕ್ಕೆ ಜಿಪಂ ಸಿಇಒ ಫೌಜಿಯಾ ತರನ್ನುಮ್ ಚಾಲನೆ ನೀಡಿದರು.
Published on

ಯಲಬುರ್ಗಾ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ನಾಗಾಲೋಟದಲ್ಲಿ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೊಂದಿಕೊಳ್ಳಬೇಕು ಎಂದು ಜಿಪಂ ಸಿಇಒ ಫೌಜಿಯಾ ತರನ್ನುಮ್ ಹೇಳಿದರು.

ತಾಳಕೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ದಾನಿಗಳ ನೆರವಿನಿಂದ ಸಿದ್ಧವಾದ ರಾಮನ್ ವಿಜ್ಞಾನ ಕೇಂದ್ರ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ತಾಳಕೇರಿ ಶಾಲೆಯ ಶಿಕ್ಷಕರ ಕಾರ್ಯ ಅದ್ಭುತ. ಅನುದಾನದ ಕೊರತೆ ಬಗ್ಗೆ ಚಿಂತಿಸದೆ ಸಮುದಾಯದ ಸಹಭಾಗಿತ್ವದಲ್ಲಿ ಮಾದರಿ ಕೆಲಸ ಮಾಡಿರುವುದು ಸಂತಸದ ಸಂಗತಿ. ಪ್ರಾಯೋಗಿಕ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿದ್ದು, ಪ್ರತಿಯೊಂದು ಶಾಲೆಗೂ ಸುಸಜ್ಜಿತ ಪ್ರಯೋಗಾಲಯ ಅತ್ಯವಶ್ಯ. ವಿಜ್ಞಾನ ಕೇಂದ್ರಕ್ಕೆ ಜಿಪಂ, ತಾಪಂ ಮತ್ತು ಗ್ರಾಪಂನಿಂದ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದರು.

ಬಿಎಸ್‌ಎಸ್‌ಎಫ್‌ನ ಸಹಾಯಕ ವ್ಯವಸ್ಥಾಪಕ ಗಂಗಾಧರಸ್ವಾಮಿ, ಹೈದರಾಬಾದ್ ಶಾಖೆಯ ಸಿಇಒ ವಿಕ್ರಮ್ ನರಸಿಂಹಮೂರ್ತಿ, ಡಿಡಿಪಿಐ ಮುತ್ತುರಡ್ಡಿ ರಡ್ಡೇರ್, ರಾಮನ್ ವಿಜ್ಞಾನ ಸಂಘದ ಅಧ್ಯಕ್ಷೆ ಈರಮ್ಮ ಬಂಗಿ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುಂಚೆ ಸಿಇಒ ಫೌಜಿಯಾ ಮಕ್ಕಳು ಬಿಡಿಸಿದ್ದ ವಿಜ್ಞಾನ ಚಿತ್ರ ವೀಕ್ಷಿಸಿ ತಮ್ಮ ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡರು. ಪ್ರಸಕ್ತ ಸಾಲಿನಲ್ಲಿ 25 ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡವರ ಪಟ್ಟಿ ನೋಡಿ ಖುಷಿಪಟ್ಟರಲ್ಲದೇ, ಇದೇ ವಿಜ್ಞಾನ ಶಿಕ್ಷಕರೊಬ್ಬರ ನಿಜವಾದ ಸಾಧನೆ ಎಂದು ಪ್ರಶಂಶಿಸಿದರು.

ಅಗಸ್ತ್ಯ ಫೌಂಡೇಶನ್‌ನಿಂದ ವಿಜ್ಞಾನ ಪ್ರದರ್ಶನ ಆಯೋಜಿಸಲಾಗಿತ್ತು. ವಿಜ್ಞಾನ ಕೇಂದ್ರದ ಮೂಲಸೌಕರ್ಯಕ್ಕಾಗಿ ಮೈಸೂರಿನ ಪಿಡಿಒ ಯತೀಶ್‌ಚಂದ್ರ, ತಾಳಕೇರಿ ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಬಾಬುಸಾಬ್ ಲೈನ್‌ದಾರ್ ತಲಾ ಒಂದು ತಿಂಗಳ ವೇತನ ನೀಡಿದರು. ವಿಜ್ಞಾನ ಕೇಂದ್ರಕ್ಕೆ ದೇಣಿಗೆ ಮತ್ತು ಸಹಾಯ ಮಾಡಿದವರನ್ನು, ಶಿಕ್ಷಣಪ್ರೇಮಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹಮಾನ ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಗಂಗಮ್ಮ ಅಮರೇಶಪ್ಪ ಸಿದ್ದಾಪುರ, ಬಿಎಎಸ್‌ಎಫ್‌ನ ಸಾಯ್ಕತ್‌ಡೇ, ಪಿಎಸ್‌ಆರ್ ಗೋಪಿನಾಥ್, ನಿರಂಜನ್, ಮಹೇಶ, ಪಿಡಿಒ ಹನುಮಂತಪ್ಪ, ಬಿಆರ್‌ಸಿ ಅಶೋಕ ಗೌಡರ, ಮುಖ್ಯಶಿಕ್ಷಕ ಬಾಬುಸಾಬ್ ಲೈನ್‌ದಾರ್, ಶಿಕ್ಷಕರಾದ ದೇವೇಂದ್ರಪ್ಪ ಜಿರ್ಲಿ, ತಿಮ್ಮಣ್ಣ ಜಗ್ಗಲ್, ಎಚ್.ರಮೇಶ್, ಸುನೀಲ್ ಅಕ್ಕಸಾಲಿ, ವೆಂಕಟಲಕ್ಷ್ಮೀ, ಶೋಭಾ ಬಾಗೇವಾಡಿ, ಶಿವಶರಣಪ್ಪ ಬಳಿಗಾರ ಸೇರಿದಂತೆ ಇತರರಿದ್ದರು.

ಮಕ್ಕಳೊಂದಿಗೆ ಮಗುವಾದ ಸಿಇಒ
ವಿಜ್ಞಾನ ಕೇಂದ್ರದ ಪ್ರತಿಯೊಂದು ಮಾದರಿ ಬಗ್ಗೆ ಮಕ್ಕಳಿಂದಲೇ ಮಾಹಿತಿ ಕೇಳಿ ಪಡೆದ ಜಿಪಂ ಸಿಇಒ ಫೌಜಿಯಾ ತರನ್ನುಮ್ ಮಕ್ಕಳೊಂದಿಗೆ ಬೆರೆತರು. ತಾವೂ ಕೂಡಾ ಕೆಲವು ಮಾದರಿ ಬಳಸಿ ಮಕ್ಕಳಿಗೆ ಪಾಠ ಮಾಡಿದರು. ವಿಜ್ಞಾನ ಸವಾಲಾಗಿ ಸ್ವೀಕರಿಸಿ ಅದನ್ನು ಬಿಡಿಸಿ ತೋರಿಸಿ ಅಚ್ಚರಿ ಮೂಡಿಸಿದರು. ಜಿಪಂ ಸಿಇಒ ಒಂದು ಗಂಟೆ ಕಾಲ ವಿಜ್ಞಾನ ಕೇಂದ್ರದಲ್ಲಿ ಮಕ್ಕಳೊಂದಿಗಿದ್ದು, ಅವರೂ ಮಗುವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net