

ಯಲಬುರ್ಗಾ: ಪಟ್ಟಣದ 6 ಮತ್ತು 7ನೇ ವಾರ್ಡಿಗೆ ಕುಡಿವ ನೀರು ಪೂರೈಸುವಂತೆ ಒತ್ತಾಯಿಸಿ ವಾರ್ಡ್ ನಿವಾಸಿಗಳು ಪಪಂ ಎದುರು ಸೋಮವಾರ ಪ್ರತಿಭಟನೆ ನಡೆಸಿ ಇಂಜಿನಿಯರ್ ಉಮೇಶ್ ಬೇಲಿಗೆ ಮನವಿ ಸಲ್ಲಿಸಿದರು.
ವಾರ್ಡ್ ನಿವಾಸಿ ಫಕೀರಪ್ಪ ಉಪ್ಪಾರ ಮಾತನಾಡಿ, ನೀರು ಸರಬರಾಜು ಕುರಿತು ಅನೇಕ ವರ್ಷಗಳಿಂದ ಪಪಂಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಕೂಡಲೇ 6 ಮತ್ತು 7ನೇ ವಾರ್ಡ್ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು. ವಾರ್ಡ್‌ಗಳಲ್ಲಿ ಚರಂಡಿ ತುಂಬಿದ್ದು, ಶೀಘ್ರವೇ ತ್ಯಾಜ್ಯ ತೆರವುಗೊಳಿಸಿ ಸಾಂಕ್ರಾಮಿಕ ರೋಗಗಳಿಂದ ನಿವಾಸಿಗಳನ್ನು ರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಪಪಂ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮನವಿ ಸಲ್ಲಿಕೆ ವೇಳೆ ನಿವಾಸಿಗಳಾದ ಶಿವರಾಜ ಗೋಡೆಕರ್, ಬಸನಗೌಡ ಮಾಲಿಪಾಟೀಲ್, ಖಾಸಿಂಸಾಬ್ ನಾಲಬಂಧ, ಶರಣಪ್ಪ ಪಾಟೀಲ್, ನಿಂಗನಗೌಡ, ಶರಣಪ್ಪ ತೊಪಲಕಟ್ಟಿ, ರಾಮಣ್ಣ ನರೆಗಲ್ಲ ಹಾಗೂ ಮಹಿಳೆಯರಿದ್ದರು.