ಬೆಲೆ ಏರಿಕೆ, ಧರ್ಮರಾಜಕಾರಣ ಬಿಜೆಪಿ ಕಾಯಕ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಆರೋಪ

09082022 yelburga news
Published on

ಯಲಬುರ್ಗಾ: ಹರ್ ಘರ್ ತಿರಂಗಾ ಬಗ್ಗೆ ಮಾತನಾಡುವ ಬಿಜೆಪಿಗರಿಗೆ ದೇಶಭಕ್ತಿ ಇದ್ದರೆ, ಆರ್‌ಎಸ್‌ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಸವಾಲು ಹಾಕಿದರು.

ಪಟ್ಟಣದ ಬಯಲು ರಂಗಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ಸೋಮವಾರ ಹಮ್ಮಿಕೊಂಡಿದ್ದ ಸ್ವಾತಂತ್ರೃದ ಅಮೃತ ಮಹೋತ್ಸವ ನಿಮಿತ್ತ ಸ್ವಾತಂತ್ರ್ಯದ ನಡಿಗೆ ಪಾದಯಾತ್ರೆ ಸಮಾರೋಪದಲ್ಲಿ ಮಾತನಾಡಿದರು. ಕಾಂಗ್ರೆಸ್‌ನವರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ಬಿಜೆಪಿಯಿಂದ ದೇಶಭಕ್ತಿಯ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇದನ್ನು ಜನರಿಗೆ ತಿಳಿಸಲು ಸ್ವಾತಂತ್ರೃದ ಸತ್ಯದ ನಡಿಗೆ ನಡೆಸಲಾಗಿದೆ. ಜನರ ಮನಸು ಕರಗಿಸಲು ಸುಳ್ಳು ಹೇಳುವುದು, ಬೆಲೆ ಏರಿಕೆ, ಧರ್ಮ ರಾಜಕಾರಣ, ಭ್ರಷ್ಟಾಚಾರ ಬಿಜೆಪಿಗರ ಕಾಯಕವಾಗಿದೆ. ಹರ್ ಘರ್ ತಿರಂಗಾ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲು ಹೊರಟಿದ್ದಾರೆ. ಅಂಜನಾದ್ರಿ ಅಭಿವೃದ್ಧಿಗೆ ಕಳೆದ ಬಾರಿ 25 ಕೋಟಿ ರೂ. ಮೀಸಲಾಡಗಿತ್ತು. ಆ ಹಣ ಎಲ್ಲಿ ಹೋಯಿತು. ಈಗ 100 ಕೋಟಿ ರೂ. ಮೀಸಲಿಟ್ಟಿದ್ದು, ಏನೇನು ಅಭಿವೃದ್ಧಿ ಮಾಡುತ್ತಾರೋ ಕಾದು ನೋಡಬೇಕಿದೆ ಎಂದರು.

ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಬಿಜೆಪಿ ಸಂಪೂರ್ಣ ವ್ಯಾಪಾರೀಕರಣ ನಡೆಸಿದೆ. ಬಿಜೆಪಿ ವಿರುದ್ಧ ಮಾತನಾಡುವವರ ಮೇಲೆ ಸಿಬಿಐ, ಇಡಿ, ಸಿಐಡಿ ಮೂಲಕ ದಾಳಿ ನಡೆಸಲಾಗುತ್ತಿದೆ. ಬಿಜೆಪಿಯವರ ಸುಳ್ಳಿಗೆ ಕಾಂಗ್ರೆಸ್ ಸತ್ಯ ಹೇಳಲು ಪಾದಯಾತ್ರೆ ನಡೆಸಲಾಗಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚಂಡೂರು, ಪ್ರಮುಖರಾದ ಯಂಕಣ್ಣ ಯರಾಶಿ, ಕೆರಿಬಸಪ್ಪ ನಿಡಗುಂದಿ, ಆರ್.ಜಿ.ನಿಂಗೋಜಿ, ಡಾ.ನಂದಿತಾ ಶಿವನಗೌಡ ದಾನರೆಡ್ಡಿ, ಸಾವಿತ್ರಿ ಗೊಲ್ಲರ್, ಮಹಾಂತೇಶ ಗಾಣಿಗೇರ, ಎಂ.ಎಫ್.ನದಾಫ್, ರೇವಣಪ್ಪ ಸಂಗಟಿ, ಈಶ್ವರ ಅಟಮಾಳಗಿ, ಶರಣಪ್ಪ ಗಾಂಜಿ, ಶರಣಮ್ಮ ಪೂಜಾರ, ಮಲ್ಲು ಜಕ್ಕಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net