

ಯಲಬುರ್ಗಾ: ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಕಾರ್ಯ ಮೂರು ದಿನದಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಪ್ರಾಚಾರ್ಯರಿಗೆ ಸೂಚಿಸಿದರು.
ಪಟ್ಟಣದ ತಹಸಿಲ್ ಕಚೇರಿಯ ಕಂದಾಯ ಭವನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕುರಿತು ಮಂಗಳವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದರು. ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗುವ ಮುಂಚೆ ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ನಿತ್ಯ ಕನಿಷ್ಠ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಬೇಕು. ಉಪನ್ಯಾಸಕರು ಈ ಕುರಿತು ಗಮನ ಹರಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಕಾಲೇಜು ಆವರಣದಲ್ಲಿಯೇ ಲಸಿಕೆ ನೀಡಲಿದ್ದಾರೆ ಎಂದರು.
ತಾಲೂಕಿನಲ್ಲಿ ಕಡಿಮೆ ಸಂಖ್ಯೆಯ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ಲಸಿಕೆ ಪಡೆಯುವಂತೆ 18 ವರ್ಷ ಮೇಲ್ಪಟ್ಟವರ ಮನವೊಲಿಸಬೇಕು. ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲೇ ಲಸಿಕೆ ಹಾಕಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ತಹಸೀಲ್ದಾರ್ ಶ್ರೀಶೈಲ ತಳವಾರ್ ಮಾತನಾಡಿ, ತಾಲೂಕಿನಲ್ಲಿ ಪಿಯುಸಿ ಮತ್ತು ಪದವಿಯ 17 ಕಾಲೇಜುಗಳಿವೆ. ಆನ್‌ಲೈನ್ ತರಗತಿ ವೇಳೆ ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಕುಕನೂರು ತಹಸೀಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ, ಗ್ರೇಡ್-2 ತಹಸೀಲ್ದಾರ್ ನಾಗಪ್ಪ ಸಜ್ಜನ್, ತಾಪಂ ಇಒ ಸೋಮಶೇಖರ ಬಿರಾದಾರ್, ಟಿಎಚ್‌ಒ ಮಂಜುನಾಥ ಬ್ಯಾಲಹುಣಸಿ, ಬಿಇಒ ಬಿ.ಮೌನೇಶ, ಪ್ರಾಚಾರ್ಯ ಶಿವರಾಜ ಗುರಿಕಾರ, ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಮನೋಜ್ ಡೊಳ್ಳಿ, ಸಿಡಿಪಿಒ ವಿರುಪಾಕ್ಷಯ್ಯ ಹಿರೇಮಠ ಹಾಗೂ ಉಪನ್ಯಾಸಕರು ಇದ್ದರು.