

ಯಲಬುರ್ಗಾ: ಪ್ರತಿಯೊಬ್ಬರೂ ಸುತ್ತಲಿನ ಪರಿಸರ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿದಾಗ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜೆ.ರಂಗಸ್ವಾಮಿ ಹೇಳಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಚ್ಛತಾ ದಿನ ಹಾಗೂ ಹುತಾತ್ಮರ ದಿನ ನಿಮಿತ್ತ ಗುರುವಾರ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಪರಿಸರ ಸ್ನೇಹಿ ವಾತಾವರಣಕ್ಕೆ ಕೈಜೋಡಿಸಬೇಕು. ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಇರುತ್ತದೆ. ಮಹಾತ್ಮ ಗಾಂಧಿ ಹೇಳಿದಂತೆ ಎಲ್ಲರೂ ಜೀವನದಲ್ಲಿ ಸತ್ಯ, ಅಹಿಂಸಾ ಮಾರ್ಗಗಳನ್ನು ಅನುಸರಿಸಬೇಕು. ಸರಳತೆ, ಸತ್ಯದ ಮಹತ್ವ ಕಲಿಸಿದ ಗಾಂಧೀಜಿ ಆದರ್ಶ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ವೈಯಕ್ತಿಕ ಯೋಗಕ್ಷೇಮ ಮತ್ತು ರಾಷ್ಟ್ರೀಯ ಪ್ರಗತಿ ಎರಡಕ್ಕೂ ಸ್ವಚ್ಛತೆ ಅಗತ್ಯವೆಂದು ಗಾಂಧೀಜಿ ಬಲವಾಗಿ ನಂಬಿದ್ದರು. ಆದ್ದರಿಂದ ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಬಳಿಕ ನ್ಯಾಯಾಧೀಶರೇ ನ್ಯಾಯಾಲಯ ಆವರಣದಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು. ವಕೀಲರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ಬೇಲೇರಿ, ಪಪಂ ಮುಖ್ಯಾಧಿಕಾರಿ ನಾಗೇಶ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ವಕೀಲರಾದ ಬಿ.ಎಂ.ಶಿರೂರು, ಎಸ್.ಎನ್. ಶ್ಯಾಗೋಟಿ, ಈರಣ್ಣ ಕೋಳೂರು, ಸಿ.ಎಸ್.ಬನ್ನಪ್ಪಗೌಡ್ರ, ರಾಜಶೇಖರ ನಿಂಗೋಜಿ, ಎ.ಎಂ. ಶಂಕ್ರಗೌಡ, ಎಸ್.ಸಿ.ಗದಗ, ಕೋರ್ಟ್ ಸಿಬ್ಬಂದಿ ರಾಘವೇಂದ್ರ ಕೋಳಿಹಾಳ, ವಿನಾಯಕ, ಪಪಂ ಪೌರ ಕಾರ್ಮಿಕರು ಇತರರಿದ್ದರು.