ಬಣ್ಣದ ಕೋಲಿಗೆ ಮುತ್ತು ಬಿಗಿದೈತಲೇ

RATHOTSAVA
ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾದ ಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.
Published on

ಯಲಬುರ್ಗಾ: ಬಣ್ಣದ ಕೋಲಿಗೆ ಮುತ್ತು ಬಿಗಿದೈತಲೇ.... ತಾಲೂಕಿನ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಚಿಕ್ಕವಂಕಲಕುಂಟಾ ಮಾರುತೇಶ್ವರ ಪ್ರಸಕ್ತ ವರ್ಷದ ಕಾರ್ಣಿಕ.

ಮಾರುತೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಮಹಾರಥೋತ್ಸವದಲ್ಲಿ ಪೂಜಾರಿ ಕಾರ್ಣಿಕವನ್ನು ನುಡಿದರು. ಈ ಬಾರಿ ಮಳೆ ಬೆಳೆ ಸಮೃದ್ಧವಾಗಿ ಆಗಲಿದೆ. ಜನ ಸುಖ ಶಾಂತಿಯಿಂದ ಇರುವ ಎಂದು ಜನರು ನಾನಾ ರೀತಿಯಲ್ಲಿ ಜನರು ಕಾರ್ಣಿಕವನ್ನು ಅರ್ಥ ಮಾಡಿಕೊಂಡರು.

ನಂತರ ಮಹಾರಥೋತ್ಸವ ಅದ್ದೂರಿಯಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೇರವೇರಿತು. ನವ ವಧುವರರು, ಭಕ್ತರು ತೇರಿಗೆ ಉತ್ತತ್ತಿ ಹಾಗೂ ಹೂಗಳನ್ನು ಸಮರ್ಪಿಸಿದರು. ಇದಕ್ಕೂ ಮುನ್ನ ದೇವಸ್ಥಾನದ ಗರ್ಭಗುಡಿಯಿಂದ ಮಾರುತೇಶ್ವರ ಮೂರ್ತಿಯನ್ನು ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮಾಡುವ ಮೂಲಕ ಕರೆತಂದು ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನ ಹಾಗೂ ಮೂರ್ತಿಗೆ ನಾನಾ ಬಗೆಯ ಹೂವುಗಳಿಂದ, ತಳ್ಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ವಿದ್ಯುತ್ ದೀಪಗಳಿಂದ ದೇವಸ್ಥಾನ ಜಗಮಗಿಸುತ್ತಿತ್ತು.

ಬೆಳಗಿನಿಂದ ಹೋಮ ಹವನಗಳು, ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.ಕಾರ್ಣಿಕ ಉತ್ಸವ, ಹೇಳಿಕೆ ಹಾಗೂ ಬೆಳ್ಳಿ ರಥೋತ್ಸವ, ಹಾಲು ಓಕುಳಿ ಕಾರ್ಯಕ್ರಮಗಳು ಜರುಗಿದವು. ಭಕ್ತರಿಗೆ ಅನ್ನದಾಸೋಹ ನಡೆಯಿತು.

ಜಾತ್ರಾ ಮಹೋತ್ಸವದಲ್ಲಿ ಡೋಳು ಕುಣಿತ, ಕರಡಿ ಮಜಲು, ಗೊಲ್ಲ ಸಮುದಾಯದವರಿಂದ ಹಾಲು ಓಕುಳಿ ಆಟ ಭಕ್ತರನ್ನು ಚಕಿತಗೊಳಿಸಿತು. ನಾನಾ ಹರಕೆ ಹೊತ್ತ ಭಕ್ತರು ದೀರ್ಘದಂಡ ನಮಸ್ಕಾರ, ಬರಿಗಾಲಿನಿಂದ ಪಾದಯಾತ್ರೆ, ಕಾಣಿಕೆ ಸಲ್ಲಿಸಿ ಭಕ್ತಿಯನ್ನು ಸಮರ್ಪಿಸಿದರು.

ಉಪ ತಹಸೀಲ್ದಾರ್ ವಿಜಯಕುಮಾರ ಗುಂಡೂರ, ಬಿಜೆಪಿ ಮುಖಂಡ ನವೀನ ಗುಳಗಣ್ಣನವರ, ಅರವಿಂದಗೌಡ ಪಾಟೀಲ್, ಸಿಪಿಐ ಮೌನೇಶ್ವರ ಪಾಟೀಲ್ ಸೇರಿ ರಾಜಕೀಯ ನಾಯಕರು ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಭಕ್ತರ ದಂಡು ಆಗಮನ: ಚಿಕ್ಕವಂಕಲಕುಂಟಾ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ಹಿರೇವಂಕಲಕುಂಟಾ, ಪುಟಗಮರಿ, ಯಡ್ಡೋಣಿ, ಚಿಕ್ಕ ಮನ್ನಾಪೂರ, ತಾಳಕೇರಿ, ಬೋದೂರು, ಶಿಡ್ಲಬಾವಿ, ಗುಂಟುಮಾಡು, ಗಾಣದಾಳ, ಹೊನಗಡ್ಡಿ, ಹೊಮ್ಮಿನಾಳ, ನಾಗರಾಳ, ವನಜಬಾವಿ, ಗುಳೆ, ಮರಕಟ್ ಸೇರಿದಂತೆ ಯಲಬುರ್ಗಾ, ಇಳಕಲ್, ಬಾಗಲಕೋಟೆ, ಬಳ್ಳಾರಿ, ರಾಯಚೂರು, ಕಲಬುರಗಿ, ಗಂಗಾವತಿ, ಕಂಪ್ಲಿ, ಹೊಸಪೇಟೆ, ಗದಗ, ಧಾರವಾಡ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಿಂದಲೂ ಭಕ್ತಾದಿಗಳು ಮಾರುತೇಶ್ವರ ದರ್ಶನ ಪಡೆದು ಪುನೀತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net