

ಯಲಬುರ್ಗಾ: ಸಂಗೀತಕ್ಕೆ ನೋವು ಮರೆಸುವ ಶಕ್ತಿ ಇದೆ ಎಂದು ಗ್ರಾಪಂ ಸದಸ್ಯ ರಮೇಶ ಕುಂಟೋಜಿ ಹೇಳಿದರು.
ತಾಲೂಕಿನ ಚೌಡಾಪುರ ಗ್ರಾಮದ ಆಂಜನೇಯ ದೇವಸ್ಥಾನ ಆವರಣದಲ್ಲಿ ಕುಷ್ಟಗಿಯ ಡಾ.ರಾಜಕುಮಾರ ಸಾಂಸ್ಕೃತಿಕ ವಿವಿಧ ಕಲಾರಂಗ ಸಂಸ್ಥೆ, ಬೆಂಗಳೂರು-ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಾಗ ರಂಗ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಸಂಗೀತ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಲಭಿಸಲಿದೆ. ಮಾನಸಿಕ ಆರೋಗ್ಯ ಸುಧಾರಣೆಗೆ ಸಂಗೀತ ಅವಶ್ಯವಿದೆ. ಸಂಗೀತದಿಂದ ಏಕಾಗ್ರತೆ, ಕ್ರಿಯಾಶೀಲತೆ ಮತ್ತು ಸಕಾರಾತ್ಮಕ ಆಲೋಚನೆಗಳು ಬರುತ್ತವೆ. ಪ್ರತಿಯೊಬ್ಬರೂ ಸಂಗೀತ ಕೇಳುವುದು ಮತ್ತು ಕಲಿಕೆಗೆ ಆಸಕ್ತಿ ವಹಿಸಬೇಕು. ಡಾ.ಮಲ್ಲಿಕಾರ್ಜುನ ಮನಸೂರ, ಪಂ.ಬಸವರಾಜ ರಾಜಗುರು, ಪಂ.ಭೀಮಸೇನ ಜೋಶಿ ಸೇರಿದಂತೆ ಹಲವರು ಸಂಗೀತ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮಕ್ಕಳಿಗೂ ಸಂಗೀತದಲ್ಲಿ ಆಸಕ್ತಿ ಬರುವಂತೆ ಮಾಡಬೇಕು ಎಂದರು.
ಪ್ರಮುಖರಾದ ದೊಡ್ಡಬಸಪ್ಪ ಮುಸಲಾಪುರ, ಕಾಡಪ್ಪ ಮ್ಯಾಗೇರಿ, ನಿಂಗಪ್ಪ ಮ್ಯಾಗೇರಿ, ಕೊಟ್ರಪ್ಪ ಬಸರಿಹಾಳ, ಹನುಮಂತಪ್ಪ ಮ್ಯಾಗೇರಿ, ಸಂಗೀತ ಗಾಯಕರಾದ ಹನುಮಂತಕುಮಾರ್ ಮೇಟಿ, ಹೊಳಿಯಪ್ಪ ಗವಾಯಿ, ಮೌನೇಶಕುಮಾರ್ ಗವಾಯಿ, ಶರಣು, ಮುದುಕೇಶ ಕುಮಾರ, ಬಸವರಾಜ ಮಹಾಂತ, ಮಂಜುನಾಥ ಕಟ್ಟಿಮನಿ, ಅನ್ನಪ್ಪ ಕಟ್ಟಿಮನಿ ಇತರರಿದ್ದರು.