

ಯಲಬುರ್ಗಾ: ಪುಸ್ತಕ ಓದುವುದರಿಂದ ಆತ್ಮ ವಿಶ್ವಾಸ ಹೆಚ್ಚುತ್ತದೆ ಎಂದು ತಾಂತ್ರಿಕ ಕೃಷಿ ಅಧಿಕಾರಿ ಗುಂಗಾಡಿ ಶರಣಪ್ಪ ಹೇಳಿದರು.
ಪಟ್ಟಣದ ಎಸ್.ಎ.ನಿಂಗೋಜಿ ಬಿ.ಇಡಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಲೇಖಕ ಶಿವರಾಜ ಕುಂಬಾರ್ ಅವರ ಚಾಲೆಂಜ್ (ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತ) ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವ ಜನಾಂಗ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಸಾಹಿತ್ಯದ ಕಡೆಗೆ ಒಲವು ತೋರುವುದರ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಜತೆಗೆ ಜ್ಞಾನ ಶಕ್ತಿ ಬೆಳೆಸಿಕೊಳ್ಳಬೇಕು. ಯುವ ಲೇಖಕ ಶಿವರಾಜ ಕುಂಬಾರ್ ಬರೆದ ಚಾಲೆಂಜ್ ಪುಸ್ತಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ. ಗ್ರಾಮೀಣ ಪ್ರದೇಶದ ಯುವಕರು ಜ್ಞಾನಾರ್ಜನೆಗಾಗಿ ಅಧ್ಯಯನಶೀಲರಾದಾಗ ಮಾತ್ರ ಉತ್ತಮ ಸ್ಥಾನಮಾನ ದೊರೆಯಲು ಸಾಧ್ಯ ಎಂದರು.
ನಿವೃತ್ತ ಪ್ರಾಚಾರ್ಯ ಜಿ.ಎಂ.ನಿಂಗೋಜಿ, ಪ್ರಾಚಾರ್ಯ ರವಿ ನಿಂಗೋಜಿ ಮಾತನಾಡಿದರು. ಕಸಾಪ ನಿಕಟ ಪೂರ್ವ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಧರಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಪುಸ್ತಕ ಬಿಡುಗಡೆಗೊಳಿಸಿದರು. ಉಪನ್ಯಾಸಕರಾದ ಮಹೇಶ ಪಟ್ಟೇದ್, ಶರಣು ಚಿಕ್ಕೊಪ್ಪ, ಪತ್ರಕರ್ತ ಮಹಾಂತೇಶ ಛಲವಾದಿ, ಕಾಲೇಜು ಸಿಬ್ಬಂದಿ ವೀರೇಶ ಹೊನ್ನೂರ ಇದ್ದರು.