ಅನಾಹುತ ತಪ್ಪಿಸಲು ಸೇತುವೆ ನಿರ್ಮಿಸಿ; ಯಲಬುರ್ಗಾದಲ್ಲಿ ಕರುನಾಡ ಪರಿಸರ ಸಂರಕ್ಷಣಾ ವೇದಿಕೆ ಪ್ರತಿಭಟನೆ

10092022 YELBURGA protest
Published on

ಯಲಬುರ್ಗಾ: ತಾಲೂಕಿನ ಕರಮುಡಿಯಿಂದ ತೊಂಡಿಹಾಳ ಸಂಪರ್ಕಿಸುವ ರಸ್ತೆಯಲ್ಲಿ ಹಳ್ಳಗಳಿಗೆ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಕರುನಾಡ ಪರಿಸರ ಸಂರಕ್ಷಣಾ ವೇದಿಕೆ ಶನಿವಾರ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್‌ಗೆ ಮನವಿ ಸಲ್ಲಿಸಿತು.

ವೇದಿಕೆ ಅಧ್ಯಕ್ಷ ಬಿ.ಎಸ್.ವೀರಾಪುರ ಮಾತನಾಡಿ, ಗಜೇಂದ್ರಗಡಕ್ಕೆ ಬಂದೋಬಸ್ತ್‌ಗೆ ತೆರಳಿದ್ದ ಮುಂಡರಗಿಯ ಇಬ್ಬರು ಪೇದೆಗಳು ಧಾರಾಕಾರ ಮಳೆಯಿಂದ ತುಂಬಿ ಹರಿಯುತ್ತಿದ್ದ ತೊಂಡಿಹಾಳ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ. ಇದಕ್ಕೂ ಮುಂಚೆ ಈ ಮಾರ್ಗದ ಹಳ್ಳದಲ್ಲಿ ಅನೇಕ ಸಾವು ನೋವು ಸಂಭವಿಸಿವೆ. ರೈತರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಳ್ಳ ದಾಟಲು ಹರಸಾಹಸ ಪಡಬೇಕಾಗುತ್ತದೆ. ಮುಂದೆ ಇಂಥ ಅನಾಹುತಗಳು ನಡೆಯದಂತೆ ಸೇತುವೆ ನಿರ್ಮಿಸುವುದು ಅವಶ್ಯವಿದೆ. ಸಂಬಂಧಿಸಿದ ಅಧಿಕಾರಿ, ಜನಪ್ರತಿನಿಧಿಗಳು ಶೀಘ್ರ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದರು. ಪ್ರಮುಖರಾದ ಸಂಗಯ್ಯ ಹಿರೇಮಠ, ಮಂಜು ಬಿಸನಳ್ಳಿ, ಕಳಕನಗೌಡ ಮಾಲಿಪಾಟೀಲ್, ಅಂದಯ್ಯ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net