

ಯಲಬುರ್ಗಾ: ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದ್ದು, ಯಾವುದೇ ಅಭಿವೃದ್ಧಿಪರ ಕೆಲಸಗಳು ಆಗುತ್ತಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಆರೋಪಿಸಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬಾಬು ಜಗಜೀವನರಾಮ್ ಜಯಂತಿ ಹಾಗೂ ಪಕ್ಷದ ಪ್ರಮುಖ ಪದಾಧಿಕಾರಿಗಳ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಎರಡು ತಿಂಗಳಿಂದ ಹಿಂದು-ಮುಸ್ಲಿಂ ನಡುವೆ ಧಾರ್ಮಿಕ ವಿಚಾರಗಳ ಬಗ್ಗೆ ಬಿಜೆಪಿ ನಾಯಕರು ಕೋಮುವಾದ ಹೇಳಿಕೆ ನೀಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ದೇಶದಲ್ಲಿ ಮೋದಿ ಸರ್ಕಾರ ಚುನಾವಣೆ ಬಂದಾಗ ಅಗತ್ಯ ವಸ್ತುಗಳ ಬೆಲೆ ಇಳಿಕೆ, ಚುನಾವಣೆ ಬಳಿಕ ಏರಿಕೆ ಸಾಮಾನ್ಯವಾಗಿದೆ. ಎಲ್‌ಪಿಜಿ, ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಬಳಕೆ ವಸ್ತುಗಳು ಗಗನಕ್ಕೇರಿದ್ದು, ಜನಸಾಮಾನ್ಯರಿಗೆ ಹೊರೆಯಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ಯಂಕಣ್ಣ ಯರಾಶಿ, ಎ.ಜಿ.ಬಾವಿಮನಿ, ಸತ್ಯನಾರಾಯಣಪ್ಪ, ಶರಣಪ್ಪ ಉಪ್ಪಾರ, ಸಾವಿತ್ರಿ, ಗೊಲ್ಲರ್, ಫರೀದಾಬೇಗಂ, ಗಿರಿಜಾ ಸಂಗಟಿ, ಶರಣಮ್ಮ ಪೂಜಾರ್, ಶಿವನಗೌಡ ದಾನರಡ್ಡಿ, ಆರ್.ಜಿ.ನಿಂಗೋಜಿ, ಶರಣಪ್ಪ ಗಾಂಜಿ, ಸುಧೀರ್ ಕೊರ್ಲಹಳ್ಳಿ, ಆನಂದ ಉಳ್ಳಾಗಡ್ಡಿ, ಛತ್ರಪ್ಪ ಛಲವಾದಿ, ಮಲ್ಲು ಜಕ್ಕಲಿ, ಈಶ್ವರ ಅಟಮಾಳಗಿ, ಪುನೀತ್ ಕೊಪ್ಪಳ ಇತರರಿದ್ದರು.