

ಯಲಬುರ್ಗಾ: ಲಿಂಗನಬಂಡಿ ನಿವಾಸಿ, ಬಯಲಾಟ ಸಂಗೀತ ನಿರ್ದೇಶಕ ತಿಮ್ಮಣ್ಣ ಚನ್ನದಾಸರ ಅವರ ಐದು ದಶಕಗಳ ಕಲಾ ಸೇವೆಗೆ ಕರ್ನಾಟಕ ಬಯಲಾಟ ಅಕಾಡೆಮಿಯ 2024-25ನೇ ಸಾಲಿನ ಗೌರವ ಪ್ರಶಸ್ತಿ ಲಭಿಸಿದೆ.
ನವ ಮಾಧ್ಯಮಗಳ ಹಾವಳಿಯಿಂದ ನೆಲಮೂಲದ ಅನೇಕ ಕಲೆಗಳು ಕಣ್ಮರೆಯಾಗುತ್ತಿರುವ ದಿನಗಳಲ್ಲೂ 70 ವಯಸ್ಸಿನ ತಿಮ್ಮಣ್ಣ ಬಯಲಾಟವನ್ನೇ ಉಸಿರಾಗಿಸಿಕೊಂಡಿದ್ದಾರೆ. ಬಯಲಾಟ ನಾಟಕಗಳನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ರಾಜ್ಯಾದ್ಯಂತ ಸಂಚರಿಸುತ್ತಿದ್ದಾರೆ. ತಿಮ್ಮಣ್ಣ ಚನ್ನದಾಸರ ಹುಟ್ಟಿದ್ದು 1954ರಲ್ಲಿ, ತಂದೆ ಮುದಕಪ್ಪ, ತಾಯಿ ದುರಗಮ್ಮ. ಐದನೇ ತರಗತಿ ಓದಿದ್ದ ಅವರು, 1971-72ರಲ್ಲಿ ತತ್ವಪದ, ತಂಬೂರಿ, ಪಿಟೀಲು ವಾದನಕ್ಕೆ ಅಣಿಯಾಗಿ, ಸೋದರ ಸಂಬಂಧಿ ಮಸ್ಕಿ ತಾಲೂಕಿನ ನೀರಲೂಟಿಯ ಕೃಷ್ಣಮೂರ್ತಿ ಅವರಿಂದ ಕಲಾ ಪ್ರಕಾರಗಳನ್ನು ಕಲಿತರು.
ತಂದೆಯೂ ಕಲಾವಿದರು: ತಿಮ್ಮಣ್ಣರ ತಂದೆ ಮುದಕಪ್ಪ ಸಹ ಬಯಲಾಟ, ಮೃದಂಗ, ತಬಲಾ ವಾದನದಲ್ಲಿ ಪ್ರಸಿದ್ಧರಾಗಿದ್ದರು. ಇವರ ಕುಟುಂಬಕ್ಕೆ ಕಲಾ ಸೇವೆ ಜತೆಗೆ ಹೊಟ್ಟೆ ಹೊರೆಯುವ ಪರಿಸ್ಥಿತಿಯೂ ಅಷ್ಟೇ ಮಹತ್ವದ್ದಾಗಿತ್ತು. ಇವರ ಆರು ಜನ ಪುತ್ರರಲ್ಲಿ ನಾಲ್ವರು ಪಂ.ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಸಂಗೀತ ಕಲಿತು ಸೇವೆ ಮಾಡುತ್ತಿರುವುದು ಗಮನಾರ್ಹ.
ಪ್ರಮುಖ ಬಯಲಾಟಗಳ ನಿರ್ದೇಶನ: ರಾಜ ರಾಜೇಶ್ವರಿ ಮಹಿಮೆ, ಶ್ರೀದೇವಿ ಮಹಾತ್ಮೆ, ಕೌಡುಲು ಖಾನವಧೆ, ರತಿ ಕಲ್ಯಾಣ, ಕರ್ಣಾರ್ಜುನರ ಕಾಳಗ, ಪಾಂಡುವಿಜಯ, ಧರ್ಮರಾಯನ ಸೋಲು, ಕನಕಾಂಗಿ ಕಲ್ಯಾಣ, ಗಯಾ, ದ್ರೂಣ ಪ್ರತಿಜ್ಞೆ, ದುಶ್ಯಾಸನ ವಧೆ, ಶಶಿರೇಖಾ ಕಲ್ಯಾಣಿ, ಪಾರ್ಥ ವಿಜಯ, ಕಂಸಾಸುರ ವಧೆ, ಅಹಿರಾವಣ, ಮಹಿರಾವಣ ಸೇರಿದಂತೆ ಹಲವು ಬಯಲಾಟ ನಾಟಕಗಳನ್ನು ನಿರ್ದೇಶನ ಮಾಡಿದ ಕೀರ್ತಿ ತಿಮ್ಮಣ್ಣ ಚನ್ನದಾಸರ್‌ಗೆ ಸಲ್ಲುತ್ತದೆ.
ಐವತ್ತು ವಷರ್ಗಳ ಸೇವೆ: ಅಲೆಮಾರಿ ಜನಾಂಗದ ಕಲಾವಿದ ತಿಮ್ಮಣ್ಣ ಚನ್ನದಾಸರ ಆಸಕ್ತರಿಗೆ 50 ವಷರ್ಗಳಿಂದ ಬಯಲಾಟ ಕಲಿಸುತ್ತಿದ್ದಾರೆ. ಕಲೆ ಅರಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳು ಬಂದಿದ್ದು, ಆನೆಗೊಂದಿ, ಕನಕಗಿರಿ, ಲಕ್ಕುಂಡಿ ಉತ್ಸವ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ರಜತ ಮಹೋತ್ಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನೇಕ ಕಾರ್ಯಕ್ರಮ ನೀಡಿದ್ದಾರೆ.
ಸೋದರ ಮಾವ ನೀರಲೂಟಿ ಕೃಷ್ಣಮೂರ್ತಿ ಅವರಿಂದ ಬಳುವಳಿಯಾಗಿ ಬಂದ ಬಯಲಾಟ, ಪಿಟೀಲು, ತಂಬೂರಿ ವಾದನ ಇತರ ಕಲೆಗಳ ಸೇವೆ ಮಾಡುತ್ತಾ ಅಲೆಮಾರಿ ಜೀವನ ಸಾಗಿಸುತ್ತಿರುವೆ. ಕಲಾ ಸೇವೆ ಪರಿಗಣಿಸಿ ರಾಜ್ಯ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿರುವುದು ಸಂತಸ ತಂದಿದೆ.
ತಿಮ್ಮಣ್ಣ ಚನ್ನದಾಸರ
ಲಿಂಗನಬಂಡಿ