

ಯಲಬುರ್ಗಾ: ತಾಲೂಕಿನ ಬಳೂಟಗಿ ಗ್ರಾಮದ ರೈತ ಮಹಾಂತಪ್ಪ ರಾಠೋಡ್ ತಮ್ಮ 2 ಎಕರೆ ಪ್ರದೇಶದಲ್ಲಿ ಬೆಳೆದ ದ್ರಾಕ್ಷಿ ಮಾರಾಟವಾಗದೇ ಗಿಡದಲ್ಲೇ ಕೊಳೆಯುತ್ತಿದೆ.
ಕಟಾವು ಮಾಡಿ, ಮಾರುಕಟ್ಟೆಗೆ ಸಾಗಿಸಲು ವಾಹನ ಸೌಲಭ್ಯ ಇಲ್ಲದ ಕಾರಣ ಈ ದುಃಸ್ಥಿತಿ ಬಂದಿದೆ. ಗೊಬ್ಬರ, ಔಷಧಿಗೆ 2 ಲಕ್ಷ ರೂ. ಖರ್ಚಾಗಿದ್ದು, ಅಂದಾಜು 5 ಲಕ್ಷ ರೂ. ಮೌಲ್ಯದಷ್ಟು ಫಸಲು ಹಾಳಾಗಿದೆ. ಈ ಬಗ್ಗೆ ಗೋಳು ತೋಡಿಕೊಂಡಿರುವ ದ್ರಾಕ್ಷಿ ಬೆಳೆಗಾರ ಮಹಾಂತಪ್ಪ ರಾಠೋಡ್, ಕರೊನಾದಿಂದಾಗಿ ಫಸಲಿಗೆ ಬಂದ ದ್ರಾಕ್ಷಿ20 ದಿನಗಳಿಂದ ಮಾರಾಟವಾಗಿಲ್ಲ. ಕೊಳ್ಳಲು ಯಾರೂ ಬರುತ್ತಿಲ್ಲ. ಬೇರೆ ಕಡೆ ರಪ್ತು ಮಾಡಲು ವಾಹನ ಸಮಸ್ಯೆ ಇದೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಮಾರಾಟ ವ್ಯವಸ್ಥೆ ಕಲ್ಪಿಸಬೇಕು. ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.