ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಖಚಿತ: ಮಾಜಿ ತಾಂತ್ರಿಕ ಕೃಷಿ ಅಧಿಕಾರಿ ಗುಂಗಾಡಿ ಶರಣಪ್ಪ ಹೇಳಿಕೆ

Gungadi Sharanappa
Published on

ಯಲಬುರ್ಗಾ: ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಮಾಜಿ ತಾಂತ್ರಿಕ ಕೃಷಿ ಅಧಿಕಾರಿ ಗುಂಗಾಡಿ ಶರಣಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಹತ್ತು ವರ್ಷ ತಾಂತ್ರಿಕ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಈಗ ರಾಜೀನಾಮೆ ಕೊಟ್ಟಿದ್ದು, ಸಮಾಜ ಸೇವೆಗಾಗಿ ಜೀವನದುದ್ದಕ್ಕೂ ಶ್ರಮಿಸುವೆ. ರಾಜಕೀಯವಾಗಿ ಯಾರು ಎಷ್ಟೇ ಒತ್ತಡ ಹೇರಿದರೂ ಮಣಿಯುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ ಎಂದರು. ಕ್ಷೇತ್ರದ ಕೆಲ ಪ್ರಮುಖ ಕಾಣದ ಕೈಗಳು ನನ್ನ ಹತ್ಯೆಗೆ ಸಂಚು ರೂಪಿಸಿವೆ ಎಂದು ಗಂಭೀರ ಆರೋಪ ಮಾಡಿದ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಹಕಾರ ಕ್ಷೇತ್ರದಿಂದ ರಾಜಕೀಯ ಅಧಿಕಾರ ಪಡೆದುಕೊಂಡವರು ಅವುಗಳ ಬಲವರ್ಧನೆಗೆ ಶ್ರಮಿಸುವ ಮೂಲಕ ರೈತರಿಗೆ ಅನುಕೂಲ ಮಾಡಬೇಕು. ಆರ್‌ಡಿಸಿಸಿ ಬ್ಯಾಂಕ್‌ಗೆ ಸರ್ಕಾರದಿಂದ ತುಂಬಬೇಕಾಗಿದ್ದ ಬಡ್ಡಿಯನ್ನು ತಾಲೂಕಿನ 25 ಕೃಷಿ ಪತ್ತಿನ ಸಹಕಾರ ಸಂಘಗಳಿಂದ 33.46 ಕೋಟಿ ರೂ. ಕಟ್ಟಿಸಿಕೊಳ್ಳಲು ಮುಂದಾಗಿರುವುದು ಖಂಡನೀಯ. ರಾಯಚೂರಿನಲ್ಲಿ ಸೆ.17 ರಂದು ನಡೆಯುವ ಆರ್‌ಡಿಸಿಸಿ ಬ್ಯಾಂಕ್ ಸದಸ್ಯರ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ನಿರ್ಧಾರ ಕೈಬಿಡಬೇಕು. ಇಲ್ಲವಾದರೆ, ಇದರ ವಿರುದ್ಧ ಹೋರಾಟ ಮಾಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net