ಅಮಿತ್ ಷಾ ರಾಜೀನಾಮೆ ನೀಡಲಿ

MANAVI SALIKE
ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆಗೆ ಒತ್ತಾಯಿಸಿ ಭೀಮ್ ಆರ್ಮಿ ತಾಲೂಕು ಸಮಿತಿಯಿಂದ ಯಲಬುರ್ಗಾದ ಶಿರಸ್ತೇದಾರ್ ಶರಣಬಸವರಾಜ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಸಮಿತಿ ಜಿಲ್ಲಾಧ್ಯಕ್ಷ ನಿಂಗು ಜಿ.ಎಸ್.ಬೆಣಕಲ್, ತಾಲೂಕು ಅಧ್ಯಕ್ಷ ಯಲ್ಲಪ್ಪ ಸನ್ನಿಂಗನವರ್, ಉಪಾಧ್ಯಕ್ಷ ಕರಿಯಪ್ಪ ಮಣ್ಣಿನವರ್ ಇತರರಿದ್ದರು.
Published on

ಯಲಬುರ್ಗಾ: ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ತಾಲೂಕು ಸಮಿತಿಯಿಂದ ರಾಷ್ಟ್ರಪತಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಸಮಿತಿ ಜಿಲ್ಲಾಧ್ಯಕ್ಷ ನಿಂಗು ಜಿ.ಎಸ್.ಬೆಣಕಲ್ ಮಾತನಾಡಿ, ಅಮಿತ್ ಷಾ ರಾಜ್ಯಸಭೆಯಲ್ಲಿ ಅಂಬೇಡ್ಕರ್ ಬಗ್ಗೆ ನೀಡಿರುವ ಅಸೂಕ್ಷ್ಮ ಹೇಳಿಕೆ ಖಂಡನೀಯ. ಸಮಾಜದಲ್ಲಿ ಶೋಷಿತ ಸಮುದಾಯ ಎದುರಿಸಿದ ಕಷ್ಟವನ್ನು ದೇವರು ಕೂಡ ಪರಿಹರಿಸಿಲ್ಲ. ಆದರೆ ಸಂವಿಧಾನ ಶಿಲ್ಪಿಯ ತ್ಯಾಗ, ಅಧ್ಯಯನ ಶಕ್ತಿ ನಮ್ಮನ್ನು ಕಾಪಾಡುತ್ತಿದೆ.

ಶತಮಾನದುದ್ದಕ್ಕೂ ಅಸ್ಪಶ್ಯತೆ, ಶೋಷಣೆ ಅನುಭವಿಸಿದ ಶೋಷಿತ ವರ್ಗಗಳು ಅಂಬೇಡ್ಕರ್ ಬದಲಿಗೆ ಅಮಿತ್ ಷಾ ಹೇಳುವಂತೆ ದೇವರ ಜಪ ಮಾಡಿದ್ದರೆ ಮತ್ತಷ್ಟು ಹಿಂದುಳಿಯಬೇಕಿತ್ತು. ಯಾವ ಧರ್ಮ, ದೇವರು ನಮ್ಮನ್ನು ಕಾಪಾಡುವುದಿಲ್ಲ. ಶಿಕ್ಷಣ, ವೈಚಾರಿಕತೆ, ವೈಜ್ಞಾನಿಕ ಮನೋಭಾವ ನಮ್ಮ ಬದುಕು ಬದಲಿಸುವ ಕೀಲಿಕೈ ಆಗಿದೆ ಎಂದು ಅಂಬೇಡ್ಕರ್ ಹೇಳಿದ್ದಾರೆ.  ಮೌಢ್ಯತೆ ಆಚರಿಸುವ, ಅಂಬೇಡ್ಕರ್‌ರನ್ನು ಅವಮಾನಿಸುವ ಹೀನ ಮನಸ್ಸಿನ ಅಮಿತ್ ಷಾ ಸಾರ್ವಜನಿಕವಾಗಿ ದೇಶದ ಜನರ ಕ್ಷಮೆ ಕೇಳುವ ಜತೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಮಿತಿ ತಾಲೂಕು ಅಧ್ಯಕ್ಷ ಯಲ್ಲಪ್ಪ ಸನ್ನಿಂಗನವರ್, ಉಪಾಧ್ಯಕ್ಷ ಕರಿಯಪ್ಪ ಮಣ್ಣಿನವರ್, ಕಾಯಾಧ್ಯಕ್ಷ ದಾದುಸಾಬ್ ಎಲಿಗಾರ, ಪದಾಧಿಕಾರಿಗಳಾದ ಮೌನೇಶ ಕೋನಸಾಗರ, ಶಂಕರ ಬಣಕಾರ, ಬಸವರಾಜ ಅಳವಂಡಿ, ವಿಶ್ವನಾಥ ಆರ್.ಬಿ. ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net