ಸ್ವಾರ್ಥಕ್ಕೆ ಸಿಲುಕಿ ನಿಜ ಜೀವನ ಮರೆತ ಮನುಜ, ಅಭಿನವ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಅನಿಸಿಕೆ

Sadbhavana Yatra, Spiritual Discourse
ಯಲಬುರ್ಗಾ ತಾಲೂಕಿನ ಮಾಟಲದಿನ್ನಿಯಲ್ಲಿ ಹಮ್ಮಿಕೊಂಡಿದ್ದ ಸದ್ಭಾವನಾ ಯಾತ್ರೆ, ಆಧ್ಯಾತ್ಮಿಕ ಪ್ರವಚನ ಸಂಪನ್ನ ಕಾರ್ಯಕ್ರಮದಲ್ಲಿ ಅಭಿನವ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶ್ರೀ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸರ್ಪಭೂಷಣ ಸ್ವಾಮೀಜಿ, ಕಲಾವಿದರಾದ ಪ್ರಶಾಂತ ಮುದ್ದೆಬಿಹಾಳ, ಡಾ.ಕುಮಾರಿ ಚನ್ನಮ್ಮ, ವೀರಪ್ಪ ಚಳಗೇರಿ, ರಾಮನಗೌಡ ಇದ್ದರು.
Published on

ಯಲಬುರ್ಗಾ: ಮನುಷ್ಯನಲ್ಲಿ ಆಸೆ, ಅಹಂಕಾರ ಹೆಚ್ಚಾಗಿದೆ. ಸ್ವಾರ್ಥಕ್ಕೆ ಸಿಲುಕಿ ನಿಜಜೀವನ ಮರೆತಿದ್ದಾನೆ ಎಂದು ಕುಷ್ಟಗಿ ತಾಲೂಕಿನ ನಿಡಶೇಸಿ ಹಿರೇಮಠದ ಕಿರಿಯ ಮಠಾಧೀಶ ಅಭಿನವ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಮಾಟಲದಿನ್ನಿ ಗ್ರಾಮದಲ್ಲಿ ಐದು ದಿನಗಳ ಕಾಲ ಹಮ್ಮಿಕೊಂಡಿದ್ದ ಸದ್ಭಾವನಾ ಯಾತ್ರೆ ಹಾಗೂ ಆಧ್ಯಾತ್ಮಿಕ ಪ್ರವಚನ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಶುಕ್ರವಾರ ರಾತ್ರಿ ಮಾತನಾಡಿದರು.

ಆಧ್ಯಾತ್ಮದ ಕಡೆಗೆ ಗಮನ ಹರಿಸಿದಾಗ ಮನುಷ್ಯರಲ್ಲಿರುವ ಅಹಂಕಾರ ದೂರವಾಗುತ್ತದೆ. ಮಾನವ ಹಣ ಗಳಿಸಿದರೆ ಸಾಧಕನಾಗುವುದಿಲ್ಲ. ಗುಣದಿಂದ ಸಾಧಕನಾಗುತ್ತಾನೆ. ಜೀವನದಲ್ಲಿ ದಾನ, ಧರ್ಮ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಭಕ್ತ ಮತ್ತು ಭಗವಂತನನ್ನು ಸಂಪರ್ಕಿಸಲು ಆಯೋಜಿಸಿರುವ ಯಾತ್ರೆಯೇ ಸದ್ಭಾವನಾ ಯಾತ್ರೆ. ಮುಸ್ಲಿಂ ಸಮುದಾಯದವರ ಮನೆಯಲ್ಲಿ ಪಾದಪೂಜೆಗೊಂಡಿರುವುದು ಮನಸ್ಸು ಪುಳಕಿತಗೊಂಡಿದೆ. ಪ್ರವಾದಿ ಮಹ್ಮದ್ ಪೈಗಂಬರ್ ಅವರ ಆದರ್ಶ ಎಲ್ಲರಿಗೂ ಸ್ಫೂರ್ತಿ. ಸದ್ಭಾವನಾ ಯಾತ್ರೆ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಭಗವಂತ ನೀಡಿದ ಜೀವನ ಸಾರ್ಥಕದಿಂದ ಬದುಕಬೇಕು. ಭಕ್ತಿ ಮತ್ತು ಸೇವೆಗೆ ಮಾಟಲದಿನ್ನಿ ಹೆಸರಾಗಿದ್ದು, ಎಲ್ಲರೂ ವ್ಯಸನಮುಕ್ತ ಬದುಕು ಕಟ್ಟಿಕೊಳ್ಳಬೇಕು ಎಂದರು.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದುಮ್ಮವಾಡದ ಶ್ರೀ ಸರ್ಪಭೂಷಣ ದೇವರು ಮಾತನಾಡಿ, ಬುತ್ತಿ ದಾನದ ಸಂಕೇತ.

ಅನ್ನ ನೀಡುವ ಕಾರ್ಯವಾದಾಗ ಜೀವನ ಸಾರ್ಥಕವಾಗುತ್ತದೆ. ಬದುಕಿನಲ್ಲಿ ಗಳಿಸಿದ್ದನ್ನು ಬಿಟ್ಟು ಹೋಗುತ್ತೇವೆ. ನಾವು ಮಾಡಿದ ದಾನ, ಧರ್ಮ ಮತ್ತು ಪುಣ್ಯ ಕಾಪಾಡುತ್ತದೆ. ಸದ್ಭಕ್ತರೊಂದಿಗೆ ಸದ್ಭಾವನಾ ಯಾತ್ರೆ ಎಲ್ಲರ ಬದುಕು ಸಾರ್ಥಕಗೊಳಿಸಿದೆ ಎಂದರು.

ಸದ್ಭಾವನಾ ಯಾತ್ರೆ ಸಮಾರೋಪದಂದು ಗ್ರಾಮದ ಮಹಿಳೆಯರು ರೊಟ್ಟಿ, ಕರಿಗಡುಬು ಮತ್ತು ವಿವಿಧ ಖಾದ್ಯ ತಯಾರಿಸಿ ಪ್ರಸಾದಕ್ಕೆ ತಂದಿದ್ದರು. ಕಾರ್ಯಕ್ರಮಕ್ಕೂ ಮುಂಚೆ ರೊಟ್ಟಿಬುತ್ತಿಯನ್ನು ಗ್ರಾಮದ ರಾಜಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ನಿಡಶೇಸಿ ಹಿರೇಮಠದ ಹಿರಿಯ ಮಠಾಧೀಶ ಶ್ರೀ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಳಿಕೋಟಿ ಸಂಗೀತ ಕಲಾವಿದ ಪ್ರಶಾಂತ ಮುದ್ದೆಬಿಹಾಳ, ಗುಲಬರ್ಗಾದ ಡಾ.ಕುಮಾರಿ ಚನ್ನಮ್ಮ, ವೀರಪ್ಪ ಚಳಗೇರಿ, ರಾಮನಗೌಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಮುಖರಾದ ಮಹೇಶ ಹಳ್ಳಿ, ಶಂಕ್ರಗೌಡ ಮಾಲಿಪಾಟೀಲ್, ಬಸನಗೌಡ ಮಾಲಿಪಾಟೀಲ್, ರವಿ ಕೋಳೂರು, ಬಸನಗೌಡ ಪೊಲೀಸ್ ಪಾಟೀಲ್, ಶಿವಯ್ಯ ಹಿರೇಮಠ, ಹನುಮಂತ ಹಂಚಿನಾಳ, ಹನುಮಗೌಡ ಪಾಟೀಲ್, ಮೌನೇಶ ಚಿತ್ರನಾಳ, ಹುಲಗಪ್ಪ ಜೀರಾಳ, ದೊಡ್ಡಪ್ಪ ಬೇವೂರು, ಮುತ್ತಣ್ಣ ಬಡಿಗೇರ್, ಹುಸೇನ್‌ಸಾಬ್ ಹಾಳಕೇರಿ, ಖಾಜಾಸಾಬ್ ಶಕ್ಕೇರ್, ದಾನಪ್ಪ ಬೇವೂರು, ರಾಮಲಿಂಗಪ್ಪ ಕೋರಿ, ದುರಗಪ್ಪ ಚನ್ನದಾಸರ, ಮೈಲಾರಪ್ಪ ಹುಣಸಿಹಾಳ, ಶಂಕ್ರಪ್ಪ ಹಳ್ಳಿ, ಶರಣಪ್ಪ ಹಡಪದ, ದಾನಪ್ಪ ಕಲ್ಭಾವಿ, ಈಶಪ್ಪ ಹಂಚಿನಾಳ, ಮಂಜು ರೊಟ್ಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net