

ಶಿರಸಿ: ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಅಂಗ ಸಂಸ್ಥೆಯಾದ ಯಕ್ಷ ಶಾಲ್ಮಲಾದಿಂದ ಆ. 31ರಿಂದ ಎರಡು ದಿನಗಳ ಯಕ್ಷೋತ್ಸವ ಸ್ವರ್ಣವಲ್ಲೀ ಮಠದಲ್ಲಿ ಏರ್ಪಡಿಸಲಾಗಿದೆ ಎಂದು ಯಕ್ಷ ಶಾಲ್ಮಲಾ ಕಾರ್ಯಾಧ್ಯಕ್ಷ ಆರ್.ಎಸ್. ಹೆಗಡೆ ಭೈರುಂಬೆ ಹೇಳಿದರು.
ನಗರದ ಯೋಗ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸ್ವರ್ಣವಲ್ಲೀ ಉಭಯ ಶ್ರೀಗಳ ಆಶೀರ್ವಾದದಿಂದ ಯಕ್ಷೋತ್ಸವದ ಪ್ರಯುಕ್ತ ಮಕ್ಕಳಿಗೆ ತಾಳಮದ್ದಲೆ ಸ್ಪರ್ಧೆ, ಪ್ರಶಸ್ತಿ ಪ್ರದಾನ, ಯಕ್ಷಗಾನ, ತಾಳಮದ್ದಲೆ ಕಾರ್ಯಕ್ರಮ ಆಯೋಜಿಸಲಾಗಿದೆ. ಆ. 31ರಂದು ಬೆಳಗ್ಗೆ 11 ಗಂಟೆಯಿಂದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿದ್ಯಾಲಯದ ಮಕ್ಕಳಿಗೆ ತಾಳಮದ್ದಲೆ ಸ್ಪರ್ಧೆ ಪ್ರಾರಂಭವಾಗಲಿದೆ.
ಸಂಜೆ 4.30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿವರು. ಅತಿಥಿಗಳಾಗಿ ಶಾಸಕ ವಿ. ಸುನೀಲಕುಮಾರ, ಯಲ್ಲಾಪುರ ವಿಶ್ವದರ್ಶನ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಧಾತ್ರಿ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಭಟ್ಟ ಪಾಲ್ಗೊಳ್ಳಲಿದ್ದಾರೆ. ದಿ.ಎಂ.ಎ. ಹೆಗಡೆ ದಂಟ್ಕಲ್ ಪ್ರಶಸ್ತಿಯನ್ನು ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ.ಜಿ.ಎಲ್. ಹೆಗಡೆ ಕುಮಟಾ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
ಸಂಜೆ 6 ಗಂಟೆಯಿಂದ ಸೀತಾಪಹಾರ ತಾಳಮದ್ದಲೆ ನಡೆಯಲಿದ್ದು, ಸೆ. 1ರಂದು ಬೆಳಗ್ಗೆ 10.30ರಿಂದ ತಾಳಮದ್ದಲೆ ಸ್ಪರ್ಧೆ ಮುಂದುವರಿಯಲಿದ್ದು, ಸಂಜೆ 4.30 ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಅನಂತಮೂರ್ತಿ ಚಾರಿಟಬಲ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಕೆಎಂಎಫ್ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಉಪಸ್ಥಿತರಿರುವರು ಎಂದರು.
ದಿ. ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಕೆ.ಜಿ. ಮಂಜುನಾಥ ಕೆಳಮನೆ ಅವರಿಗೆ ಪ್ರದಾನ ಮಾಡಲಾಗುವುದು. ಸಂಜೆ 6.30 ರಿಂದ ಪಟ್ಟಾಭಿಷೇಕ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಯಕ್ಷ ಶಾಲ್ಮಲಾ ಸದಸ್ಯ ಪ್ರವೀಣ ಹೆಗಡೆ ಇದ್ದರು.