

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯ ಉಡುಪಿ, ಕಾಪು, ಬೈಂದೂರು ಹಾಗೂ ಕುಂದಾಪುರ ತಾಲೂಕಿನ 90 ಪ್ರೌಢಶಾಲೆಗಳಲ್ಲಿ ಈ ಬಾರಿ 40 ಮಂದಿ ಯಕ್ಷಗಾನ ಗುರುಗಳು ನಮ್ಮ ನೆಲದ ಅಪೂರ್ವ ಕಲೆಯಾದ ಯಕ್ಷಗಾನದ ಶಿಕ್ಷಣ ನೀಡುತ್ತಿದ್ದಾರೆ. ನಾಲ್ಕನೇ ಮೂರು ಭಾಗದಷ್ಟು ವಿದ್ಯಾರ್ಥಿನಿಯರೇ ಪಾಲ್ಗೊಳ್ಳುತ್ತಿದ್ದು, ಈ ಕ್ಷೇತ್ರದಲ್ಲಿಯೂ ಹುಡುಗಿಯರೇ ಪಾರಮ್ಯ ಮೆರೆಯುತ್ತಿದ್ದಾರೆ ಎಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ 2024ನೇ ಸಾಲಿನ ಯಕ್ಷ ಶಿಕ್ಷಣ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
17 ವರ್ಷದ ಹಿಂದೆ ಉಡುಪಿ ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುವ ಉದ್ದೇಶದಿಂದ ಯಕ್ಷ ಶಿಕ್ಷಣ ಆರಂಭಗೊಂಡಿತ್ತು. ಈ ಕಾಲೇಜಿನ ವಿದ್ಯಾರ್ಥಿನಿಯರು ಯಕ್ಷಗಾನ ಕಲಿತು, ಪ್ರತಿವರ್ಷವೂ ಸುಂದರವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಈ ಶಾಲೆಯ ಯಕ್ಷ ಶಿಕ್ಷಣದ ವಿದ್ಯಾರ್ಥಿಯಾಗಿ, ಪ್ರಸ್ತುತ ಐಟಿ. ಉದ್ಯೋಗಿಯಾಗಿರುವ ಹಾಗೂ ಉಭಯ ತಿಟ್ಟುಗಳಲ್ಲೂ ಪ್ರಾವೀಣ್ಯತೆ ಹೊಂದಿದ ಆದ್ಯತಾ ಭಟ್ ಅವರು ಶಿಕ್ಷಕಿಯಾಗಿ ದೊರೆತಿರುವುದು ನಮಗೆ ಅಭಿಮಾನದ ಹಾಗೂ ಸಾರ್ಥಕತೆಯ ಸಂಕೇತವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಸಂಸತ್ತನ್ನೂ ಉದ್ಘಾಟಿಸಲಾಯಿತು. ನಿವೃತ್ತ ಉಪನ್ಯಾಸಕ ದಯಾನಂದ್, ಎಸ್ಡಿಎಂಸಿ ಅಧ್ಯಕ್ಷೆ ನವ್ಯಾ ನಾಯಕ್, ನಿವೃತ್ತ ಪ್ರಾಂಶುಪಾಲೆ ತಾರಾ, ಯಕ್ಷಗಾನ ಗುರುಗಳಾದ ನಿರಂಜನ ಭಟ್, ಆದ್ಯತಾ ಭಟ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿದರು. ಶಿಕ್ಷಕ ಶೇಖರ್ ಬೋವಿ ಕಾರ್ಯಕ್ರಮ ನಿರೂಪಿಸಿದರು. ಉಷಾಕುಮಾರಿ ವಂದಿಸಿದರು.