ಮಣ್ಣಿಗೆಯಲ್ಲಿ ಯಕ್ಷಶ್ರೀ ಪ್ರಶಸ್ತಿ ಪ್ತದಾನ 12ರಂದು

PRASHASTI PRADHAN
Published on

ಹೊನ್ನಾವರ: ತಾಲೂಕಿನ ಮಣ್ಣಿಗೆಯಲ್ಲಿ ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಪ್ತದಾನ ಸಮಾರಂಭ ನ. 12ರಂದು ಸಂಜೆ 4.30 ಗಂಟೆಗೆ ನಡೆಯಲಿದೆ. ಮೊದಲ ಪ್ರಶಸ್ತಿಗೆ ಶತಾವಧಾನಿ ಡಾ. ಆರ್. ಗಣೇಶ ಆಯ್ಕೆಯಾಗಿದ್ದಾರೆ ಎಂದು ಹಿರಿಯ ಯಕ್ಷಗಾನ ಕಲಾವಿದ ಹಾಗೂ ಕಾರ್ಯಕ್ರಮ ಆಯೋಜಕ ಗಣಪತಿ ಹೆಗಡೆ ಕೊಂಡದಕುಳಿ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ನಾಡೋಜ ಡಾ. ಹಂ.ಪ. ನಾಗರಾಜಯ್ಯ ಸಮಾರಂಭದ ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಸೆಲ್ಕೊ ಸಿಇಒ ಮೋಹನ ಹೆಗಡೆ, ಟ್ರಸ್ಟ್ ಅಧ್ಯಕ್ಷ ಸತ್ಯನಾರಾಯಣ ಶೇಟ್ ಉಪಸ್ಥಿತರಿರುವರು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ವಿಭಾಗದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿಯು ಒಂದು ಲಕ್ಷ ರೂ. ಮತ್ತು ಬೆಳ್ಳಿ ಖಡ್ಗವನ್ನೊಳಗೊಂಡಿದೆ. ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದ ಶತಾವಧಾನಿ ಡಾ. ಆರ್. ಗಣೇಶ ಅವರು ಈ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದೇ ವೇದಿಕೆಯಲ್ಲಿ ರಾತ್ರಿ 9 ಗಂಟೆಗೆ ’ಸುಧನ್ವಾರ್ಜುನ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ಯಕ್ಷಗಾನ ಅರ್ಥಧಾರಿ, ಸೆಲ್ಕೋ ಸಿಇಒ ಮೋಹನ ಹೆಗಡೆ ಮಾತನಾಡಿ, ನ. 12ನ್ನು ’ಯಕ್ಷಗಾನ ದಿನ’ವನ್ನಾಗಿ ಆಚರಿಸಲು ತೀರ್ವನಿಸಲಾಗಿದೆ. ಪ್ರತಿವರ್ಷ ನ. 12ರಂದು ಯಕ್ಷಶ್ರೀ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಾಡಿನ ಹಿರಿಯ ಗಣ್ಯರನ್ನು ಕರೆದು ಜಿಲ್ಲೆಯ ಮಹತ್ವಪೂರ್ಣ ಕಲೆಯನ್ನು ಪ್ರದರ್ಶಿಸುವುದು ಸಂಘಟನೆಯ ಉದ್ದೇಶವಾಗಿದೆ ಎಂದರು.

ಸಂಘಟಕ ದತ್ತರಾಮ ಭಟ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net