

ಮೂಲ್ಕಿ: ಕಲಾವಿದನಾಗಿ ಯಕ್ಷರಂಗಕ್ಕೆ ಸುರೇಶ್ ಕೊಲಕಾಡಿ ನೀಡಿದ ಕೊಡುಗೆ ಅನನ್ಯವಾಗಿದೆ. ಉಚಿತ ಶಿಕ್ಷಣ, ಕಲೆಗೆ ಪ್ರೋತ್ಸಾಹ ನೀಡುವ ಕಾರ್ಯ ಅಭಿನಂದನೀಯ ಕಾರ್ಯ ನಿರಂತರವಾಗಿರಲಿ ಎಂದು ಹಿರಿಯ ವಾಗ್ಮಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ಹೇಳಿದರು.
ಕಕ್ವ ಶ್ರೀ ಕೋರ್ದಬ್ಬು ದೈವಸ್ಥಾನದ ಬಳಿ ನಡೆದ ಯಕ್ಷಮಿತ್ರರು ಪಂಜಿನಡ್ಕ ಹಾಗೂ ಸುರೇಶ್ ಕೊಲಕಾಡಿ ಶಿಷ್ಯವೃಂದ ಮತ್ತು ಅಭಿಮಾನಿ ಬಳಗ ಆಶ್ರಯದಲ್ಲಿ ಯಕ್ಷಗಾನ ಕಲಾವಿದ ಸುರೇಶ್ ಕೊಲಕಾಡಿ ಅವರ 35ನೇ ವರ್ಷದ ಯಕ್ಷಪಯಣದ ಪ್ರಯುಕ್ತ ಸಾರ್ವಜನಿಕ ಸನ್ಮಾನ, ಬಿರುದು ಪ್ರಧಾನ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದರು.
ಕಲಾವಿದ ಸುರೇಶ್ ಕೊಲಕಾಡಿ ಅವರಿಗೆ ಕಲಾವಾರಿಧಿ ಬಿರುದು ನೀಡಿ ಗೌರವಿಸಲಾಯಿತು. ಬಡ ಕಲಾವಿದರಿಗೆ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ನೀಡಲಾಯಿತು.
ಮುಖ್ಯ ಅತಿಥಿ ಕಿರಣ್ ಕುಮಾರ್ ಪಡುಪಣಂಬೂರು ಮಾತನಾಡಿದರು. ಕೊಲಕಾಡಿ ಕೆಪಿಎಸ್‌ಕೆ ಶಾಲೆ ನಿವೃತ್ತ ಮುಖ್ಯಶಿಕ್ಷಕ ವಸಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಾರ್ಕೂರು ಶ್ರೀ ಕಚ್ಚೂರು ಮಾಲ್ದಿ ದೇವಸ್ಥಾನದ ಧರ್ಮದರ್ಶಿ ಗೋಕುಲ್ ದಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅತಿಥಿಗಳಾಗಿ ಪತ್ರಕರ್ತ ವಾಲ್ಟರ್ ನಂದಳಿಕೆ, ಅತಿಕಾರಿಬೆಟ್ಟು ಪಂಚಾಯತಿ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಕಿಲ್ಪಾಡಿ ಗ್ರಾಪಂ ಸದಸ್ಯ ಗೋಪಿನಾಥ್ ಪಡಂಗ, ಮಾಜಿ ಅಧ್ಯಕ್ಷೆ ಶಾರದ ವಸಂತ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗಂಗಾಧರ್ ಶೆಟ್ಟಿ ಬರ್ಕೆತೋಟ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನೀಲ್ ಆಳ್ವ, ಹರೀಶ್ ಕೊಲಕಾಡಿ, ರಘುರಾಜ್ ಕದ್ರಿ, ಶಿವರಾಮ್ ಮೆಸ್ಕಾಂ, ಯಕ್ಷಗಾನ ಕಲಾವಿದ ವಿಜಯ್ ಕುಮಾರ್ ಶೆಟ್ಟಿ ಮೈಲೊಟ್ಟು ಮತ್ತಿತರರು ಉಪಸ್ಥಿತರಿದ್ದರು
ಯಕ್ಷಮಿತ್ರರು ಅಧ್ಯಕ್ಷ ಶರಣ್ ಶೆಟ್ಟಿ ಸ್ವಾಗತಿಸಿದರು. ಹರೀಶ್ ಕೋಟ್ಯಾನ್ ವಂದಿಸಿದರು. ಅರ್ಪಿತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸುರೇಶ್ ಕೊಲಕಾಡಿ ಯಕ್ಷಗಾನಕ್ಕೆ ಮಾತ್ರ ಸೀಮಿತವಾಗದೆ, ಜಾನಪದ ಕಲೆ, ದೈವಾರಾಧನೆಗಳಲ್ಲಿ ತೊಡಗಿಸಿಕೊಂಡು ದೂರದರ್ಶನ, ಆಕಾಶವಾಣಿ ಕಲಾವಿದರಾಗಿ ಗ್ರಾಮೀಣ ವಲಯದಲ್ಲಿ ನೂರಾರು ಶಿಷ್ಯರಿಗೆ ಉಚಿತ ಯಕ್ಷ ಶಿಕ್ಷಣ ಕೊಟ್ಟ ಮಹಾನ್ ಕಲಾವಿದ. ಕಿರಣ್ ಕುಮಾರ್ ಪಡುಪಣಂಬೂರು