

ಮಂಗಳೂರು : ಭಾಷೆಯ ಶುದ್ಧ ಸ್ವರೂಪವನ್ನು ಯಕ್ಷಗಾನ ರಂಗಸ್ಥಳದಲ್ಲಿ ಮಾತ್ರ ಕಾಣಲು ಸಾಧ್ಯ. ಅದರಲ್ಲೂ ತಾಳಮದ್ದಳೆಯಲ್ಲಿ ಕನ್ನಡ
ಭಾಷೆಯ ಸಿರಿವಂತಿಕೆ ಇದೆ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಹೇಳಿದರು.
ಯಕ್ಷಾಂಗಣ ಮಂಗಳೂರು ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ವತಿಯಿಂದ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ಆರಂಭವಾದ ಯಕ್ಷಗಾನ ತಾಳಮದ್ದಳೆ ಸಪ್ತಾಹದಲ್ಲಿ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.
ಆಶಯ ಭಾಷಣ ಮಾಡಿದ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ‘ಕರ್ನಾಟಕ ರಾಜ್ಯೋತ್ಸವದ ಸುವರ್ಣ ವರ್ಷಾಚರಣೆಯ ಸಂಕಲ್ಪ ಸಾಕಾರ ಆಗಬೇಕಿದ್ದರೆ ರಥವೂ ಬೇಡ. ರಾಜಕಾರಣಿಗಳು ಕನ್ನಡಕ್ಕಾಗಿ ಕರೆ ಕೊಡುವುದೂ ಬೇಡ. ಪ್ರಾಥಮಿಕ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ, ನೆಲದ ಕಲೆ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆಯನ್ನು ಪೋಷಿಸಿದರೆ ಸಾಕು ಎಂದರು.
ಕಲ್ಕೂರ ಪ್ರತಿಷ್ಠಾನದ ಸಂಸ್ಥಾಪಕ ಪ್ರದೀಪ ಕುಮಾರ್ ಕಲ್ಕೂರ ಅವರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಪ್ರದಾನ ಮಾಡಲಾಯಿತು. ವಿನೋದಾ ಕಲ್ಕೂರ ಜತೆಗಿದ್ದರು. ತಾಳಮದ್ದಳೆ ಸಪ್ತಾಹವನ್ನು ಕ.ಸಾ.ಪ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಉದ್ಘಾಟಿಸಿದರು.
ಕದ್ರಿ ಮಂಜುನಾಥ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದರು.
ಸೂರಜ್ ಇಂಟರ್ ನ್ಯಾಶನಲ್ ಸ್ಕೂಲ್ನ ಆಡಳಿತ ನಿರ್ದೇಶಕ ಡಾ.ಮಂಜುನಾಥ ಎಸ್. ರೇವಣ್ಕರ್, ಉದ್ಯಮಿಗಳಾದ ವಿ.ಕರುಣಾಕರ್, ಜಿತೇಂದ್ರ ಕೊಟ್ಟಾರಿ, ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘ ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಿ.ಎಸ್.ಭಂಡಾರಿ, ವಸಂತ ಶೆಟ್ಟಿ ಬೆಳ್ಳಾರೆ ಮುಖ್ಯ ಅತಿಥಿಗಳಾಗಿದ್ದರು.
ಯಕ್ಷಾಂಗಣದ ಪದಾಧಿಕಾರಿಗಳಾದ ಎ.ಕೆ.ಜಯರಾಮ ಶೇಖ, ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ರವೀಂದ್ರ ರೈ ಕಲ್ಲಿಮಾರು, ರಾಜಾರಾಮಶೆಟ್ಟಿ ಮನವಳಿಕೆ ಗುತ್ತು, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ , ವಾಸಪ್ಪ ಶೆಟ್ಟಿ ಬೆಳ್ಳಾರೆ ಉಪಸ್ಥಿತರಿದ್ದರು.ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಸುಮಾ ಪ್ರಸಾದ್ ಸನ್ಮಾನಪತ್ರ ವಾಚಿಸಿದರು. ಸಂಚಾಲಕಿ ನಿವೇದಿತ ಎನ್. ಶೆಟ್ಟಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.