ಉಡುಪಿಯೊಂದಿಗೆ 'ಅಮ್ಮಣ್ಣಾಯ' 25 ವರ್ಷದ ನಂಟು

Ammannaya
Published on

ರಜತ ಗೌರವದ ಸನ್ಮಾನ ಸ್ವೀಕರಿಸಿದ್ದ ಭಾಗವತ

ವಿಜಯವಾಣಿ ಸುದ್ದಿಜಾಲ ಉಡುಪಿ

ಯಕ್ಷಗಾನದ ಖ್ಯಾತ ಭಾಗವತರಾಗಿದ್ದ ದಿನೇಶ್​ ಅಮ್ಮಣ್ಣಾಯ ಅವರಿಗೆ ಉಡುಪಿಯಲ್ಲಿ ನಡೆಯುತ್ತಿದ್ದ ಒಂದು ತಾಳಮದ್ದಳೆಯೊಂದಿಗೆ ನಿರಂತರ 25 ವರ್ಷದ ನಂಟು ಇತ್ತು. ಉಡುಪಿಯ ಸುಧಾಕರ ಆಚಾರ್ಯ ಅವರು ಪ್ರತಿವರ್ಷ ಆ.15ರಂದು ಆಯೋಜಿಸುತ್ತಿದ್ದ ಸ್ವಾತಂತ್ರ್ಯೋತ್ಸವ ತಾಳಮದ್ದಳೆಯಲ್ಲಿ ಅಮ್ಮಣ್ಣಾಯರ ಕಂಚಿನ ಕಂಠದ ಸೊಬಗು ಅನಾವರಣಗೊಳ್ಳುತ್ತಿತ್ತು.

2024ರಲ್ಲಿ ನಡೆದಿದ್ದ 34ನೇ ವರ್ಷದ ತಾಳಮದ್ದಳೆಯಲ್ಲಿ ಸಂಘಟನೆಯ ವತಿಯಿಂದ ಅಮ್ಮಣ್ಣಾಯ ಅವರಿಗೆ 25 ವರ್ಷದ ನಿರಂತರ ಭಾಗವತಿಕೆಯ ದಾಖಲೆಯ ಹಿನ್ನೆಲೆಯಲ್ಲಿ ಪತ್ನಿ ಸಮೇತರಾಗಿ ರಜತ ಗೌರವ ಸನ್ಮಾನ ಮಾಡಲಾಗಿತ್ತು.

ಗೌರವ ಸ್ವೀಕರಿಸಿ ಮಾತನಾಡಿದ್ದ ಅವರು, ಯುವ ಯಕ್ಷಾವತಾರಿಗಳನ್ನು ಕಂಡು ಭಾವ ಪರವಶನಾದೆ. ಯಕ್ಷಗಾನದಲ್ಲಿ ನಾನು ಇಷ್ಟು ಎತ್ತರಕ್ಕೆ ಬೆಳೆಯಲು ದೇವರ ಹಾಗೂ ಕಲಾಭಿಮಾನಿಗಳ ಆಶೀರ್ವಾದ ಕಾರಣ. ಕಲಾ ಸರಸ್ವತಿಯ ಆರಾಧನೆ ನನ್ನ ಕರ್ತವ್ಯವಾಗಿದ್ದು, ನಿವೃತ್ತನಾಗಿದ್ದರೂ ಸಹ ಹಾಡುತ್ತಿದ್ದೇನೆ ಎಂದಿದ್ದರು.

ಕುವೈತ್​ನಲ್ಲಿ ನಡೆದಿದ್ದ ತುಳು ಪರ್ಬದಲ್ಲಿ ಸಂಯೋಜಿಸಿದ್ದ ಗಾಂಡೀವ ಬಿರುವ ಎಂಬ ತುಳು ಯಕ್ಷಗಾನದಲ್ಲೂ ಸಹ ಅಮ್ಮಣ್ಣಾಯ ಅವರು ಭಾಗವತಿಕೆ ಮಾಡಿದ್ದರು ಎಂದು ಯಕ್ಷಗಾನ ಸಂಘಟಕ ಸುಧಾಕರ ಆಚಾರ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net