

ಉಡುಪಿ: ಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ಅವರಲ್ಲಿ ವಾಕ್ಚಾತುರ್ಯ, ಅಭಿನಯ, ನೃತ್ಯ, ಪೌರಾಣಿಕ ಪ್ರಸಂಗಗಳ ಬಗ್ಗೆ ಜ್ಞಾನ ಉಂಟಾಗುತ್ತದೆ. ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಭಾನುವಾರ ಹಂಗಾರಕಟ್ಟೆ - ಐರೋಡಿ ಯಕ್ಷಗಾನ ಕೇಂದ್ರದಲ್ಲಿ ಹಮ್ಮಿಕೊಂಡ ಯಕ್ಷಗಾನ ನೃತ್ಯ, ಅಭಿನಯ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನ ಕಲಿಕೆ ಕೇವಲ ಕಲಾವಿದನಾಗಲು ಮಾತ್ರವಲ್ಲದೆ ದೈಹಿಕವಾಗಿ ಆರೋಗ್ಯದ ಜೊತೆಗೆ ಮನಸ್ಸಿಗೂ ಶಾಂತಿ, ನೆಮ್ಮದಿ ಲಭಿಸುತ್ತದೆ. ಹೀಗಾಗಿ ಮಕ್ಕಳಿಗೆ ಯಕ್ಷಗಾನ ಶಿಕ್ಷಣವನ್ನು ನೀಡಲು ಪೋಷಕರು ಹಿಂದೇಟು ಹಾಕಬಾರದು. ಯಕ್ಷಗಾನವನ್ನು ಅಭ್ಯಾಸ ಮಾಡಿದ ಮಕ್ಕಳು ಶೈಕ್ಷಣಿಕವಾಗಿಯೂ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಮಕ್ಕಳ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬೆಳವಣಿಗೆಗೆ ಬೇಕಾದ ಎಲ್ಲಾ ಅಂಶಗಳು ಈ ಕಲೆಯಲ್ಲಿವೆ. ಜೀವನದಲ್ಲಿ ಶಿಸ್ತು ಬದ್ಧ ಜೀವನ ನಡೆಸಲು ಸಹಕಾರಿಯಾಗುತ್ತದೆ. ಶುದ್ಧ ಕನ್ನಡ ಮಾತನಾಡುವ ಏಕೈಕ ಕಲೆ ಯಕ್ಷಗಾನ ಎಂದರು.
ಯಕ್ಷಗಾನ ಗುರು, ಶಿಬಿರದ ನಿರ್ದೇಶಕ ಕೆ.ಸದಾನಂದ ಐತಾಳ್ ಮಾತನಾಡಿ, ಯಕ್ಷಗಾನದಲ್ಲಿ ಮಕ್ಕಳ ಭಾವನೆಗಳನ್ನು ನಕರತಾತ್ಮಕವಾಗಿ ಕೆರಳಿಸುವ ಅಂಶಗಳಿಲ್ಲ. ಮಕ್ಕಳ ಭಾವನೆಗಳನ್ನು ಅರಳಿಸುವ, ಅವರ ವಿಕಸನಕ್ಕೆ ಕಾರಣವಾಗುವ ಅಂಶಗಳೇ ಹೆಚ್ಚಿವೆ. ಹೀಗಾಗಿ ಪ್ರತಿ ಕುಟುಂಬದಲ್ಲಿ ಒಬ್ಬರಾದರೂ ಯಕ್ಷಗಾನವನ್ನು ಕಲಿಯಲೇ ಬೇಕು ಎಂದರು.
ಯಕ್ಷಗಾನ ಕೇಂದ್ರದ ಅಧ್ಯಕ್ಷ ಹಾಗೂ ಉದ್ಯಮಿ ಆನಂದ ಸಿ.ಕುಂದರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಯಕ್ಷಗಾನ ಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಟೇಶ್ವರದ ಗೀತಾ ಎಚ್ಎಸ್ಎನ್ ಫೌಂಡೇಶನ್ನ ಅಧ್ಯಕ್ಷ ಶಂಕರ ಐತಾಳ್ ಅಮಾಸೆಬೈಲು ಉಪಸ್ಥಿತರಿದ್ದರು. ಈ ಯಕ್ಷಗಾನ ತರಬೇತಿ ಶಿಬಿರ ಏ.13ರಿಂದ ಮೇ 3ರವರೆಗೆ ನಡೆಯಲಿದೆ.