

- ಶ್ರವಣ್‌ಕುಮಾರ್ ನಾಳ ಪುತ್ತೂರು
ಡಾ. ಶಿವರಾಮ ಕಾರಂತರ ಕರ್ಮಭೂಮಿ ಪುತ್ತೂರಿನ ಬಾಲವನವನ್ನು ಜನಾಕರ್ಷಣೆಯ ಕೇಂದ್ರವಾಗಿ ರೂಪಿಸಲು ಚಿಂತನೆ ನಡೆಸಲಾಗಿದ್ದು, ಇದರ ಭಾಗವಾಗಿ ‘ಯಕ್ಷ ರಂಗಾಯಣ’ ಎಂಬ ದೇಶದ ಮೊದಲ ಯಕ್ಷಗಾನ ಶಿಕ್ಷಣ ತರಬೇತಿ, ಸಂಶೋಧನಾ ಕೇಂದ್ರ ಸ್ಥಾಪನೆಗೆ ರೂಪುರೇಷೆ ಸಿದ್ಧಗೊಂಡಿದೆ.
ಇಂಥದ್ದೊಂದು ಕೇಂದ್ರ ಸ್ಥಾಪನೆ ಬಗ್ಗೆ ವರ್ಷದ ಹಿಂದೆಯೇ ಪ್ರಸ್ತಾವನೆ ಇತ್ತು. ಆದರೆ ಸ್ಥಳ ಅಂತಿಮಗೊಂಡಿರಲಿಲ್ಲ. ಕೋಟ ಕಾರಂತ ಥೀಂ ಪಾರ್ಕ್, ಪುತ್ತೂರಿನ ಬಾಲವನ ಅಥವಾ ಮಂಗಳೂರಿನ ಹೆಸರು ಇದ್ದು, ಈಗ ಪುತ್ತೂರು ಬಾಲವನವನ್ನು ಅಂತಿಮಗೊಳಿಸಲಾಗಿದೆ.
ಶಾಸಕ ಸಂಜೀವ ಮಠಂದೂರು ಈ ಬಗ್ಗೆ ಉತ್ಸುಕರಾಗಿದ್ದು, ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಸಹಿತ ಉನ್ನತ ಮಟ್ಟದ ಅಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೂ ಸಮಾಲೋಚನೆ ನಡೆಸಿದ್ದಾರೆ. ಮೂರು ತಿಂಗಳೊಳಗೆ ಯಕ್ಷ ರಂಗಾಯಣ ಸ್ಥಾಪನೆ ಬಗ್ಗೆ ಸ್ಪಷ್ಟತೆ ಲಭಿಸುವ ನಿರೀಕ್ಷೆಗಳಿವೆ.
ಏನಿದು ಯಕ್ಷ ರಂಗಾಯಣ?: ರಂಗ ಕಲಾವಿದರನ್ನು ತರಬೇತುಗೊಳಿಸುವ ರಂಗಾಯಣ ರಂಗಶಿಕ್ಷಣ ಸಂಸ್ಥೆಯಂತೆ ಯಕ್ಷಗಾನ ಕಲಾವಿದರನ್ನು ತರಬೇತುಗೊಳಿಸುವ ಶಿಕ್ಷಣ ಸಂಸ್ಥೆಯೇ ಯಕ್ಷ ರಂಗಾಯಣ. ನೇರವಾಗಿ ರಾಜ್ಯ ಸರ್ಕಾರದ ಅನುದಾನದಲ್ಲಿ ನಡೆಯುವ ಈ ಸಂಸ್ಥೆಯಲ್ಲಿ ನೃತ್ಯ, ಅರ್ಥಧಾರಿಕೆ, ಭಾಗವತಿಕೆ, ಬಣ್ಣಗಾರಿಕೆ, ಹಿಮ್ಮೇಳ, ಮುಮ್ಮೇಳ ಸಹಿತ ಯಕ್ಷಗಾನದ ಸಂಪೂರ್ಣ ತರಬೇತಿಯೊಂದಿಗೆ ಕಲಾವಿದರನ್ನು ರೂಪುಗೊಳಿಸುವ ಕೇಂದ್ರ ನಿರ್ಮಾಣಗೊಳ್ಳಲಿದೆ. ಇಲ್ಲಿ ತರಬೇತಿ ಪಡೆದವರಿಗೆ ಸರ್ಕಾರದಿಂದ ಅಧಿಕೃತ ಪ್ರಮಾಣ ಪತ್ರ ಸಿಗಲಿದೆ. ಯಕ್ಷಗಾನಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೂ ಯಕ್ಷ ರಂಗಾಯಣದಲ್ಲಿ ಅವಕಾಶ ಸಿಗಲಿದೆ.
ಯಕ್ಷ ಸಾಹಿತ್ಯ ಡಿಜಿಟಲೀಕರಣ: ಪುರಾತನ ಯಕ್ಷಗಾನ ಸಾಹಿತ್ಯಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆ ಯಕ್ಷ ರಂಗಾಯಣದಿಂದ ನಡೆಯಲಿದೆ. ಜತೆಗೆ ಪಠ್ಯ ಪುಸ್ತಕದಲ್ಲಿ ಯಕ್ಷಗಾನ ಸಾಹಿತ್ಯ ಸೇರ್ಪಡೆ, ಮೇಳಗಳಿಗೆ ಬೇಕಾದ ಪ್ರಸಂಗ, ಕಲಾವಿದರ ಪೂರೈಕೆ, ವಿವಿಧ ಮೇಳಗಳ ಪ್ರಸಂಗಗಳ ಡಿಜಿಟಲೈಸೇಶನ್ ಮಾಡಲಾಗುತ್ತದೆ. ಯಕ್ಷಗಾನ ತರಬೇತಿಗಾಗಿ ರಂಗಮಂದಿರ ನಿರ್ಮಾಣ, ತರಬೇತಿ ಪಡೆಯುವ ಕಲಾವಿದರಿಗೆ ಮೂಲಸೌಲಭ್ಯ, ಯಕ್ಷಗಾನದ ನಿವೃತ್ತ ಕಲಾವಿದರನ್ನು ಗುರುತಿಸಿ, ಸಾಧನೆಗಳನ್ನು ದಾಖಲೀಕರಣಗೊಳಿಸುವ ಯೋಜನೆ ಇದೆ.
ಯಕ್ಷಗಾನ ಸ್ವರೂಪದ ರಂಗಾಯಣ ಬಾಲವನದಲ್ಲಿ ಸ್ಥಾಪನೆಯಾದರೆ ಇದೊಂದು ಯಕ್ಷಗಾನದ ನೋಡಲ್ ಸೆಂಟರ್ ಆಗಿ ಅಭಿವೃದ್ಧಿಗೊಳ್ಳಲಿದೆ. ಇದರಿಂದ ಯಕ್ಷಗಾನ ಕಲೆ ಅಭಿವೃದ್ಧಿಗೊಳ್ಳುವುದು ಮಾತ್ರವಲ್ಲದೆ ಯಕ್ಷಗಾನ ಕಲಾವಿದರಿಗೆ, ಸಂಶೋಧಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.
- ಡಾ. ಯತೀಶ್ ಉಳ್ಳಾಲ್, ಪುತ್ತೂರು ಉಪವಿಭಾಗಾಧಿಕಾರಿ
ಬಾಲವನದಲ್ಲಿ ಯಕ್ಷ ರಂಗಾಯಣ ಎಂಬ ದೇಶದ ಮೊದಲ ಯಕ್ಷಗಾನ ಶಿಕ್ಷಣ ತರಬೇತಿ, ಸಂಶೋಧನಾ ಕೇಂದ್ರ ಸ್ಥಾಪನೆಗೆ ರೂಪುರೇಷೆ ಸಿದ್ಧಗೊಂಡಿದ್ದು, ತರಬೇತಿಗಾಗಿ 4 ಯಕ್ಷಗಾನ ರಂಗಮಂದಿರ ನಿರ್ಮಿಸುವ ಯೋಜನೆ ಇದೆ. ತರಬೇತಿಗಾಗಿ ಬರುವ ಕಲಾವಿದರ ವಸತಿಗಾಗಿ ಹೆಚ್ಚುವರಿ ಜಾಗದ ಅವಶ್ಯಕತೆಯಿದ್ದು, ಈ ಬಗ್ಗೆ ಜಾಗ ಹುಡುಕುವಂತೆ ಕಂದಾಯ ಇಲಾಖೆಗೆ ಸೂಚಿಸಲಾಗಿದೆ.
- ಸಂಜೀವ ಮಠಂದೂರು, ಪುತ್ತೂರು ಶಾಸಕ