

ಸಿದ್ದಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಹಾಗೂ ಪೌರಾಣಿಕ ಕಥೆಗಳನ್ನು ತಿಳಿದುಕೊಳ್ಳುವುದಕ್ಕೆ ಯಕ್ಷಗಾನ ತಾಳಮದ್ದಳೆ ಪೂರಕವಾಗಿದೆ. ಇಂತಹ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಜತೆಗೆ ನಮ್ಮ ನಾಡಿನ ಸಂಸ್ಕೃತಿ ಕಲೆಯನ್ನು ಉಳಿಸಬೇಕಾಗಿದೆ ಎಂದು ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಹಾಬಲೇಶ್ವರ ದೇವರು ಭಟ್ಟ ಅಗ್ಗೇರೆ ಹೇಳಿದರು.
ತಾಲೂಕಿನ ಕವಲಕೊಪ್ಪದ ವಿನಾಯಕ ದೇವಾಲಯದಲ್ಲಿ ಕಲಾಭಾಸ್ಕರ ಇಟಗಿ ಅವರು ಸೋಮವಾರ ಆಯೋಜಿಸಿದ್ದ ತಾಳಮದ್ದಳೆ ಪಂಚಕ-2023 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಎನ್.ವಿ. ಹೆಗಡೆ ಮುತ್ತಿಗೆ ಮಾತನಾಡಿ, ಕಲೆಯು ನಮ್ಮ ನಿಜವಾದ ಸ್ವತ್ತು. ಅದನ್ನು ಅಧಿಕಾರಯುತವಾಗಿ ಬಳಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು. ಬಿದ್ರಕಾನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಚಟ್ನಳ್ಳಿ ಉಪಸ್ಥಿತಿತರಿದ್ದರು.
ನಂತರ ಹಲಸಿನಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಭೀಷ್ಮಾರ್ಜುನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಹೆಗಡೆ ಮೂರುರು, ಮದ್ದಳೆಯಲ್ಲಿ ನಾಗಭೂಷಣ ರಾವ್ ಹೆಗ್ಗೋಡು, ಚಂಡೆಯಲ್ಲಿ ರಘುಪತಿ ಹೆಗಡೆ ಹೂಡೆಹದ್ದ, ಗಜಾನನ ಹೆಗಡೆ ಸಾಂತೂರು ಸಹಕರಿಸಿದರು.
ಮುಮ್ಮೇಳದಲ್ಲಿ ಸರ್ಪಂಗಳ ಈಶ್ವರ ಭಟ್ಟ (ಭೀಷ್ಮ), ರಾಧಾಕೃಷ್ಣ ಭಟ್ಟ ಕಲ್ಚಾರ್ (ಕೃಷ್ಣ), ಪವನ್ ಕಿರಣ್ಕೆರೆ (ಕೌರವ), ಶ್ರೀನಿವಾಸ ಭಾಗವತ ಮತ್ತಿಘಟ್ಟ (ಅರ್ಜುನ), ಇಟಗಿ ಮಹಾಬಲೇಶ್ವರ (ಅಭಿಮನ್ಯು) ಪಾತ್ರ ನಿರ್ವಹಿದರು. ಕಲಾಭಾಸ್ಕರ ಸಂಸ್ಥೆಯ ಕಾರ್ಯದರ್ಶಿ ವಿನಾಯಕ ಕವಲಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು.