

ಉಡುಪಿ: ಕುಟುಂಬ ಮತ್ತು ಸಮಾಜದಿಂದ ದೂರ ಉಳಿದು, ದೈನಂದಿನ ಜೀವನ ನಿರ್ವಹಣೆಗಾಗಿ ಭಿಕ್ಷಾಟನೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗುವ ಅನಿವಾರ್ಯತೆಗೆ ಸಿಲುಕುವ ಲಿಂಗತ್ವ ಅಲ್ಪ ಸಂಖ್ಯಾತರು, ಕೌಶಲ್ಯಾಬಿವೃಧ್ದಿ ತರಬೇತಿಗಳನ್ನು ಪಡೆಯುವುದರ ಮೂಲಕ ಗೌರವಯುತ ಜೀವನ ನಡೆಸಲು ಉಡುಪಿ ಜಿಲ್ಲಾಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಅತ್ಯುತ್ತಮ ಅವಕಾಶ ಕಲ್ಪಿಸುತ್ತಿದ್ದು, ಕರಾವಳಿಯ ಹೆಮ್ಮಯೆ ಕಲೆ ಯಕ್ಷಗಾನ ಪ್ರದರ್ಶನದ ಕುರಿತು ಜೂನ್ ಒಂದು ತಿಂಗಳ ತರಬೇತಿ ನೀಡಲಾಗಿದೆ.
ಜಿಲ್ಲೆಯಲ್ಲಿ ೨೮೩ ಮಂದಿ ಲಿಂಗತ್ವ ಅಲ್ಪ ಸಂಖ್ಯಾತರಿದ್ದು, ಇವರು ಜೀವನ ನಿರ್ವಹಣೆಗೆ ತಮಗೆ ಇಷ್ಠವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಬದಲು ಕೌಶಲ್ಯ ತರಬೇತಿಗಳ ಮೂಲಕ ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡಲು ಯಕ್ಷಗಾನ ತರಬೇತಿ ನೀಡಲಾಗಿದೆ. ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಡಿಯಲ್ಲಿ ಜಿಲ್ಲೆಯಲ್ಲಿರುವ ಆಸಕ್ತ ೧೯ ಮಂದಿ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಕಾರ್ಕಳದ ಸ್ತಿಶಕ್ತಿ ಭವನದಲ್ಲಿ ರೂ. ೧೦,೦೦೦ ಸ್ಟೈಪೆಂಡ್‌ನೊದಿಗೆ ತರಬೇತಿ ಪಡೆದ ಲಿಂಗತ್ವ ಅಲ್ಪ ಸಂಖ್ಯಾತರು ನೃತ್ಯ, ಅಭಿನಯ, ಸಂಭಾಷಣೆ ಯಲ್ಲಿ ಪರಿಣಿತ ಸಾಧಿಸಿ ತರಬೇತಿ ಅಂತ್ಯದಲ್ಲಿ ಶ್ವೇತ ಕುಮಾರ ಚೆರಿತ್ರೆ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿ, ಮೆಚ್ಚುಗೆ ಗಳಿಸಿದ್ದಾರೆ. ಯಕ್ಷಗಾನ ತರಬೇತಿಯ ನಾಟ್ಯ ಗುರುಗಳಾಗಿ ಸುಧೀರ್ ಉಪ್ಪೂರು ಮತ್ತು ವಿಜಯಗಾಣಿಗ ಬೀಜಮಕ್ಕಿ, ಚಂಡೆ ಶಶಿಕುಮಾರ್,ಮದ್ದಳೆ ಯಲ್ಲಿ ನವೀನ್ ಕುಮಾರ್ ಮತ್ತು ಭಾಗವತಿಕೆಯಲ್ಲಿ ಸುದೀಪ್ ಚಂದ್ರ ಶೆಟ್ಟಿ ಸಹಕಾರ ನೀಡಿದ್ದಾರೆ.
ಯಕ್ಷಗಾನ ತರಬೇತಿ ಪಡೆದಿರುವ ಈ ಲಿಂಗತ್ವ ಅಲ್ಪ ಸಂಖ್ಯಾತರು ಯಕ್ಷಗಾನ ಪ್ರಸಂಗಗಳಲ್ಲಿ ಸ್ವತಂತ್ರವಾಗಿ ವೇಷದಾರಿಗಳಾಗಿ ಅಭಿನಯಿಸುವ ಸಾಮರ್ಥ್ಯವನ್ನು ಹೊಂದಿದ್ದು ಈ ಮೂಲಕ ಜೀವನ ನಿರ್ವಹಣೆಗಾಗಿ ಆರ್ಥಿಕವಾಗಿ ಸಂಪಾದನೆ ಮಾಡಲು ಹಾಗೂ ತಮ್ಮದೇ ತಂಡಗಳನ್ನು ರಚಿಸಿಕೊಂಡು ಸ್ವತಂತ್ರವಾಗಿ ಕಾರ್ಯಕ್ರಮಗಳನ್ನು ನೀಡಲು ಸಮರ್ಥರಾಗಿದ್ದಾರೆ. ಹೊರ ಜಿಲ್ಲೆ , ರಾಜ್ಯ, ದೇಶ ವಿದೇಶಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಲು ಉತ್ಸುಕರಾಗಿರುವ ಇವರಿಗೆ ಸೂಕ್ತ ಪ್ರೋತ್ಸಾಹ, ಬೆಂಬಲ ಮತ್ತು ಅವಕಾಶಗಳನ್ನು ನೀಡುವ ಮಹತ್ತರ ಜವಾಬ್ದಾರಿ ಇಡೀ ಸಮಾಜದ್ದಾಗಿದೆ.