ಬಜೆಟ್‌ನಲ್ಲಿ ಯಕ್ಷಗಾನ ಅಕಾಡೆಮಿಗೆ 10 ಕೋಟಿ ರೂ. ನೀಡಲು ಆಗ್ರಹ

udp-11-yaksha 1a
Published on

ಉಡುಪಿ: ಯಕ್ಷಗಾನ ಅಖಿಲ ಭಾರತೀಯ ಕಲೆಯಾಗಿದ್ದು, ಇದಕ್ಕೆ ದ್ರಾವಿಡ, ಜಾನಪದ, ಶಾಸ್ತ್ರೀಯ ಕಲೆ ಮುಂತಾದ ಹಣೆ ಪಟ್ಟಿ ಹಚ್ಚುವುದು ಸಲ್ಲದು. ಸಾವಿರ ವರ್ಷದ ಇತಿಹಾಸ ಹೊಂದಿರುವ ಕಲಾ ಪ್ರಾಕರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ರಾಜ್ಯ ಸರ್ಕಾರ ಯಕ್ಷಗಾನ ಅಕಾಡೆಮಿಗೆ ಬಜೆಟ್‌ನಲ್ಲಿ ಪ್ರತೀ ವರ್ಷ 10 ಕೋಟಿ ರೂ. ಮೀಸಲಿಡಬೇಕು ಎಂದು ಹಿರಿಯ ವಿದ್ವಾಂಸ, ಸಮ್ಮೇಳನಾಧ್ಯಕ್ಷ ಡಾ.ಎಂ. ಪ್ರಭಾಕರ ಜೋಶಿ ಆಗ್ರಹಿಸಿದ್ದಾರೆ.

ಶನಿವಾರ ಎಂಜಿಎಂ ಕಾಲೇಜು ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಉಡುಪಿ ಜಿಲ್ಲಾಡಳಿತ ವತಿಯಿಂದ ನಡೆದ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು.

ಪ್ರತೀವರ್ಷ ಸಮ್ಮೇಳನ ಆಯೋಜಿಸಬೇಕು. ಅಸಾಧ್ಯವಾದರೆ ಕನಿಷ್ಠ 2 ವರ್ಷಕ್ಕೊಮ್ಮೆ ರಾಜ್ಯಮಟ್ಟದ ಸಮ್ಮೇಳನ ಹಾಗೂ 3 ವರ್ಷಕ್ಕೊಮ್ಮೆ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ನಡೆಯಬೇಕು. ನಾವೆಲ್ಲರೂ ಇದಕ್ಕೆ ಸರ್ಕಾರದೊಂದಿಗೆ ಕೈಜೋಡಿಸಬೇಕು. ಸರ್ಕಾರ 6 ತಿಂಗಳ ಮುನ್ನವೇ ಸಮ್ಮೇಳನವನ್ನು ಘೊಷಿಸಬೇಕು. ಇಂದಿನ ದಿನಗಳಲ್ಲಿ ಯಕ್ಷಗಾನ ಅಕಾಡೆಮಿ ಮತ್ತು ಕಲಾವಿದರ ಮಧ್ಯೆ ಬಹುದೊಡ್ಡ ಅಂತರವಿದೆ. ಇದನ್ನು ಹೋಗಲಾಡಿಸಲು ಯಕ್ಷಗಾನ ಸಮ್ಮೇಳನಗಳು ಸಹಕಾರಿಯಾಗಲಿದೆ. ಎಲ್ಲಾ ಕಲಾವಿದರ ದತ್ತಾಂಶ ಸಂಗ್ರಹಿಸುವುದು ಸಹಿತ 30 ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಅಜೆಂಡಾ ಬೆಂಬಲಿಸಬೇಡಿ
ಯಕ್ಷಗಾನ ವಿಷಯದಲ್ಲಿ 52 ಪಿಎಚ್‌ಡಿಗಳು ಬಂದಿವೆ. ಇದರಲ್ಲಿ 40 ಅಧಿಕ ಪಿಎಚ್‌ಡಿಗಳು ಸತ್ವಪೂರ್ಣವಾಗಿವೆ ಎಂಬುದು ಕಲೆಯ ಹೆಗ್ಗಳಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಅಜೆಂಡಾದೊಂದಿಗೆ ಯಕ್ಷಗಾನದ ಬಗ್ಗೆ ಅಧ್ಯಯನ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅಂಥವರಿಗೆ ಯಕ್ಷಗಾನಕ್ಕೆ ಕೊಡುಗೆ ಸಲ್ಲಿಸುವ ಯಾವ ಉದ್ದೇಶವೂ ಇರುವುದಿಲ್ಲ. ಹೀಗಾಗಿ ಕಲಾವಿದರು, ಮೇಳದ ಯಜಮಾನರು ಸಹಕಾರ ನೀಡಬಾರದು ಎಂದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ, ಯಕ್ಷಗಾನ ಕರಾವಳಿಯ ಜೀವನಾಡಿ. ಯಕ್ಷಗಾನ ಹಾಗೂ ಭಾರತೀಯ ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ. ಯುವ ಜನಾಂಗ ಯಕ್ಷಗಾನದಿಂದಾಗಿ ರಾಮಾಯಣ, ಮಹಾಭಾರತ, ಪುರಾಣಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ. ಯಕ್ಷಗಾನ ಕನ್ನಡ ಭಾಷೆ, ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಯಕ್ಷಗಾನವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯಕ್ಷಗಾನ ಸಾಮಾಜಿಕ ನಾಟಕದ ರೀತಿ ಪ್ರದರ್ಶನವಾಗದೆ ಮೂಲ ಸತ್ವವನ್ನು ಉಳಿಸಿಕೊಳ್ಳಬೇಕು. ಶಾಲಾ, ಕಾಲೇಜುಗಳಲ್ಲಿ ಯಕ್ಷಗಾನ ಕಲಿಯುವಂತಾಗಬೇಕು ಎಂದು ಆಶಿಸಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷಗಾನ ಸಮ್ಮೇಳನ ಕಾರ್ಯಾಧ್ಯಕ್ಷ ಡಾ. ಜಿ.ಎಲ್. ಹೆಗಡೆ, ಯಕ್ಷಗಾನ ಉಳಿದರೆ ಮಾತ್ರ ಕನ್ನಡ ಉಳಿಯುತ್ತದೆ. ಸಾವಿರಾರು ಜನ ಅಶು ಕಾವ್ಯ ಸೃಷ್ಟಿ ಮಾಡಿದ್ದಾರೆ. ಸಾವಿರಾರು ಕುಟುಂಬಕ್ಕೆ ಅನ್ನ ಕೊಡುವ ಉದ್ಯಮಕ್ಕೆ ಸರ್ಕಾರದ ಅಧಿಕೃತ ಮುದ್ರೆ ಬಿದ್ದಿರುವುದು ಹೆಮ್ಮೆಯ ಸಂಗತಿ. ಕನ್ನಡ ಶಾಸ್ತ್ರೀಯ ಸ್ಥಾನ ಸಿಗಲು ಯಕ್ಷಗಾನಕ್ಕೆ ಮೊರೆ ಹೋಗಬೇಕು. ಅಷ್ಟು ದೀರ್ಘ ಇತಿಹಾಸ ಯಕ್ಷಗಾನಕ್ಕಿದೆ. ಯಕ್ಷ ರಂಗಾಯಣ ಈಗಾಗಲೇ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಯಕ್ಷಗಾನ ಶಾಲೆಗಳು ಪ್ರಾರಂಭವಾಗಬೇಕು ಎಂಬುದು ನಮ್ಮ ಕನಸು ಎಂದರು.

ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮೈಸೂರು ಎಲೆಕ್ಟ್ರಿಕಲ್ ಲಿಮಿಟೆಡ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್,.ಬಲ್ಲಾಳ್, ಕಟೀಲು ದೇವಸ್ಥಾನದ ಅರ್ಚಕ ವಾಸುದೇವ ಆಸ್ರಣ್ಣ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮೊಕ್ತೇಸರ ಕೆರಾಡಿ ಚಂದ್ರಶೇಖರ ಶೆಟ್ಟಿ, ಕುಂಭಾಶಿ ದೇವಸ್ಥಾನದ ಮೊಕ್ತೇಸರ ಶ್ರೀರಮಣ ಉಪಾಧ್ಯ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಮ್ಮೇಳನ ಸಮಿತಿ ಸದಸ್ಯ ಧನಂಜಯ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿಪಂ ಸಿಇಒ ಪ್ರಸನ್ನ ಉಪಸ್ಥಿತರಿದ್ದರು. ಸಮ್ಮೇಳನ ಸಮಿತಿ ಪ್ರಧಾನ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಸ್ವಾಗತಿಸಿ, ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮೆರವಣಿಗೆ
ಸಭಾ ಕಾರ್ಯಕ್ರಮಕ್ಕೂ ಮುನ್ನ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಿಂದ ಎಂ.ಜಿ.ಎಂ ಮೈದಾನದವರೆಗೆ ಸಮಗ್ರ ಯಕ್ಷಗಾನ ಸಮ್ಮೇಳನ ಅಧ್ಯಕ್ಷ ಡಾ. ಎಂ. ಪ್ರಭಾಕರ ಜೋಶಿ ದಂಪತಿಯನ್ನು ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ಶೋಭಾಯಾತ್ರೆಗೆ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿ ಜಿ. ಶಂಕರ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ. ಜಿ ಶಂಕರ್ ಚಾಲನೆ ನೀಡಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ಉಪಸ್ಥಿತರಿದ್ದರು.
ಚಿತ್ರ
ಯುಡಿಪಿ-11-ಯಕ್ಷಗಾನ 1
ಎಂಜಿಎಂ ಕಾಲೇಜು ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಉಡುಪಿ ಜಿಲ್ಲಾಡಳಿತ ವತಿಯಿಂದ ನಡೆದ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು.
ಯುಡಿಪಿ-11-ಯಕ್ಷಗಾನ 2
ಸಭಾ ಕಾರ್ಯಕ್ರಮಕ್ಕೂ ಮುನ್ನ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಿಂದ ಎಂ.ಜಿ.ಎಂ ಮೈದಾನದವರೆಗೆ ಸಮಗ್ರ ಯಕ್ಷಗಾನ ಸಮ್ಮೇಳನ ಅಧ್ಯಕ್ಷ ಡಾ. ಎಂ. ಪ್ರಭಾಕರ ಜೋಶಿ ದಂಪತಿಯನ್ನು ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net