ರಾಜ್ಯಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನ ಅಧ್ಯಕ್ಷರಾಗಿ ಡಾ. ಪ್ರಭಾಕರ ಜೋಶಿ ಆಯ್ಕೆ

udp-9-yakshagana
Published on

ಉಡುಪಿ: ರಾಜ್ಯದ ಮೊದಲ ಸಮಗ್ರ ಕರ್ನಾಟಕ ಯಕ್ಷಗಾನ ಸಮ್ಮೇಳನ ಫೆ. ೧೧ ಮತ್ತು ೧೨ ರಂದು ಎಂ.ಜಿ.ಎಂ. ಕಾಲೇಜು ಆವರಣದಲ್ಲಿ ನಡೆಯಲಿದ್ದು, ಅಧ್ಯಕ್ಷರಾಗಿ ಡಾ. ಎಂ. ಪ್ರಭಾಕರ ಜೋಶಿ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಸೋಮವಾರ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ತಾತ್ಕಾಲಿಕ ಕಚೇರಿ ಉದ್ಘಾಟಿಸಿ, ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ೨ ದಿನದ ಸಮ್ಮೇಳನಕ್ಕಾಗಿ ರಾಜ್ಯ ಸರ್ಕಾರ ೨ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. ಜಿಲ್ಲೆಯ ಧಾರ್ಮಿಕ ಕೇಂದ್ರಗಳು ಊಟೋಪಚಾರದ ವ್ಯವಸ್ಥೆ ಮಾಡಲಿವೆ. ಉಳಿದಂತೆ ದಾನಿಗಳ ಸಹಕಾರದಲ್ಲಿ ಮಾದರಿ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಯಕ್ಷಗಾನದಲ್ಲಿ ಪ್ರಸ್ತುತ ಇರುವ ಸವಾಲುಗಳು, ಮುಂದಿನ ದಿನದಲ್ಲಿ ಕೈಗೊಳ್ಳಬೇಕಾದ ಯೋಜನೆಗಳು, ಹೊಸ ಪೀಳಿಗೆಗೆ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುವುದು ಸೇರಿದಂತೆ ಯಕ್ಷಗಾನ ಬೆಳವಣಿಗೆ ಕುರಿತು ಸಮಗ್ರ ಚರ್ಚೆ ನಡೆಯಲಿದೆ ಎಂದರು.

ಯಕ್ಷಗಾನ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ. ಜಿ.ಎಲ್.ಹೆಗಡೆ ಮಾತನಾಡಿ, ಯಕ್ಷಗಾನವು ಕನ್ನಡ ಭಾಷೆಯ ಬೆಳವಣಿಗೆಗೆ ಅತೀ ಹೆಚ್ಚಿನ ಕೊಡುಗೆ ನೀಡಿದೆ. ಇಂದಿಗೂ ಶುದ್ಧ ಕನ್ನಡ ಬಳಕೆಯಲ್ಲಿರುವ ಕಲಾಪ್ರಕಾರ ಯಕ್ಷಗಾನ. ಕನ್ನಡದ ಕಾವ್ಯಗಳನ್ನು ಕಟ್ಟಿ ನಿಲ್ಲಿಸಿದೆ. ಇದುವರೆಗೆ ೫೨ ಮಂದಿ ಯಕ್ಷಗಾನದ ವಿವಿಧ ವಿಷಯಗಳಿಗೆ ಸಂಬಂದಿಸಿದಂತೆ ಪಿ.ಎಚ್.ಡಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಶಾಸಕ ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ, ಸಾಲಿಗ್ರಾಮ ಮತ್ತು ಇತರೆ ಮೇಳಗಳ ಮುಖ್ಯಸ್ಥ ಪಿ.ಕಿಶನ್ ಹೆಗ್ಡೆ, ಮಂದಾರ್ತಿ ಮೇಳ ಸಂಚಾಲಕ ಧನಂಜಯ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಶಿವರುದ್ರಪ್ಪ ವಂದಿಸಿದರು. ಮುರಳಿ ಕಡೆಕಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net