ಯಕ್ಷಗಾನಕ್ಕೆ ಕಟೀಲು ಕ್ಷೇತ್ರದ ಕೊಡುಗೆ ಅದ್ವಿತೀಯ...

Yakshagana
Published on

ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶ್ಲಾಘನೆ

ತಾಳಮದ್ದಲೆ ಕಮ್ಮಟ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಕಟೀಲು ಕ್ಷೇತ್ರದಲ್ಲಿ ಆರು ಯಕ್ಷಗಾನ ಮೇಳಗಳಿದ್ದು, ಪ್ರತಿರಾತ್ರಿ ಯಕ್ಷಗಾನ ನೀಡುತ್ತಿದೆ. ಮುಂದಿನ ಅನೇಕ ವರ್ಷದವರೆಗೆ ಕಾರ್ಯಕ್ರಮ ನಿಗದಿಯಾಗಿದ್ದು ಇದು ದುರ್ಗಾ ಮಾತೆಯ ಲೀಲೆ ಹಾಗೂ ಯಕ್ಷಗಾನದ ಶಕ್ತಿಯೂ ಆಗಿದೆ. ಯಕ್ಷಗಾನದ ಬೆಳವಣಿಗೆಗೆ ಕಟೀಲು ಕ್ಷೇತ್ರದ ಕೊಡುಗೆ ಅದ್ವಿತೀಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಶ್ಲಾಘಿಸಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಹಾಗೂ ದೇವಸ್ಥಾನದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಎರಡು ದಿನದ ಯಕ್ಷಗಾನ ತಾಳಮದ್ದಲೆ ಕಮ್ಮಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಕ್ಷ ಝೇಂಕಾರ ವಿಭಾಗ

ಕಾರ್ಯಕ್ರಮ ಉದ್ಘಾಟಿಸಿದ ಕಟೀಲು ದೇವಳದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಮಾತನಾಡಿ, ಯಕ್ಷಗಾನದ ತಾಳಮದ್ದಲೆ ಇಂದಿಗೂ ಬಹು ಜನಪ್ರಿಯತೆ ಪಡೆಯುತ್ತಿದೆ. ದೇವಿಗೆ ಅತಿ ಪ್ರಿಯವಾದ ಯಕ್ಷಗಾನವನ್ನು ಮಕ್ಕಳಿಗೆ ಕಲಿಸಲು ಕಾಲೇಜಿನಲ್ಲಿ "ಯಕ್ಷ ಝೇಂಕಾರ' ಎಂಬ ವಿಭಾಗ ಪ್ರಾರಂಭಿಸಲಾಗಿದೆ. ಸಾತ್ವಿಕ ಅಭಿನಯದ ತಾಳಮದ್ದಲೆ ಬೆಳೆಯಲಿ ಎಂದರು.

ಯಕ್ಷಗಾನ ಅಕಾಡೆಮಿ ಸದಸ್ಯ ರಾಜೇಶ ಕುಳಾಯಿ, ಸಿವಿಲ್​ ಇಂಜಿನಿಯರ್​ ದೊಡ್ಡಯ್ಯ ಮೂಲ್ಯ, ಕಟೀಲು ಕೊಂಡೆಲ್ತಾಯ ದೇವಳದ ಮೊಕ್ತೇಸರ ಲೋಕಯ್ಯ ಸಾಲ್ಯಾನ, ಕಾಲೇಜಿನ ಪ್ರಾಂಶುಪಾಲ ಡಾ.ವಿಜಯ, ಕಸಾಪ ಮುಲ್ಕಿ ತಾಲೂಕು ಅಧ್ಯಕ್ಷ ಮಿಥುನ ಉಡುಪ ಇತರರಿದ್ದರು.

ಎರಡು ದಿನದ ವಿಚಾರಗೋಷ್ಠಿಗಳಲ್ಲಿ ತಾಳಮದ್ದಲೆಯಲ್ಲಿ ಪುರಾಣ ಹಾಗೂ ಪ್ರಸಂಗಗಳ ಸಮನ್ವಯ, ಪ್ರಕೃತ ತಾಳಮದ್ದಲೆ ಸ್ಥಿತಿಗತಿ, ತಾಳಮದ್ದಲೆಯ ಔಚಿತ್ಯ ಪರಾಮರ್ಶೆ ಎಂಬ ವಿಷಯದಲ್ಲಿ ಚರ್ಚೆ ನಡೆಯಲಿವೆ.

ಸಂಸ್ಕೃತ ಅಧ್ಯಾಪಕ ಶ್ರೀವತ್ಸ ಎಸ್​.ಆರ್​. ಕಾರ್ಯಕ್ರಮ ನಿರೂಪಿಸಿದರು.

ಹಿಂದೆ ಕಲೆಗಳಿಗೆ ರಾಜಾಶ್ರಯ ಲಭಿಸುತ್ತಿರುವಂತೆ ಇಂದು ನಮ್ಮ ಶೃದ್ಧಾ ಕೇಂದ್ರಗಳಾದ ದೇಗುಲಗಳಿಂದ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಕಟೀಲು ಸೇರಿದಂತೆ ವಿವಿಧ ದೇಗುಲಗಳ 40ಕ್ಕೂ ಅಧಿಕ ಯಕ್ಷಗಾನ ಮೇಳಗಳು ಕಾರ್ಯಾಚರಿಸುತ್ತಿವೆ. ದುರ್ಗಾ ಮಕ್ಕಳ ಮೇಳದ ಸಾಧನೆ ಗಮನಿಸಿದ್ದೇನೆ. ಯಕ್ಷಗಾನ ನಮ್ಮ ಮಣ್ಣಿನ ಕಲೆ. ಸುಸಂಸತ ಸಮಾಜ ಕಟ್ಟಬಲ್ಲ ಶಕ್ತಿ ಹೊಂದಿದೆ. ಹೀಗಾಗಿ ಅಕಾಡೆಮಿ ವತಿಯಿಂದ ಮಕ್ಕಳ ಮೇಳಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. | ಡಾ.ತಲ್ಲೂರು ಶಿವರಾಮ ಶೆಟ್ಟಿ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net