ಅಮೆರಿಕದ ಕಲಾವಿದರಿಗಾಗಿ ಬೆಂಗಳೂರಲ್ಲಿ ಯಕ್ಷಗಾನ ಪ್ರದರ್ಶನ

UDP-24-1-Yakshagana
ಬೆಂಗಳೂರಿನಲ್ಲಿ ಅಮೆರಿಕದ ಕಲಾವಿದರಿಗಾಗಿ ಉಡುಪಿಯ ಥಿಯೇಟರ್​ ಯಕ್ಷ (ರಿ.) ಕಲಾವಿದರು ಯಕ್ಷಗಾನ ಪ್ರದರ್ಶಿಸಿದರು.
Published on

ಗಮನ ಸೆಳೆದ ಥಿಯೇಟರ್​ ಯಕ್ಷ ಉಡುಪಿ | ದೀವಟಿಗೆ ಬೆಳಕಿನಲ್ಲಿ ಪ್ರಸಂಗ

ವಿಜಯವಾಣಿ ಸುದ್ದಿಜಾಲ ಉಡುಪಿ
ಅಮೆರಿಕದ ನ್ಯೂಯಾರ್ಕ್​ ಮೂಲದ ರಂಗಕಲಾವಿದರಿಗೆ ತರಬೇತಿಯ ಭಾಗವಾಗಿ ಥಿಯೇಟರ್​ ಯಕ್ಷ (ರಿ.) ಉಡುಪಿಯ ಕಲಾವಿದರು ಬೆಂಗಳೂರು ಮಾಗಡಿಯ ಇನ್​ಫನೆಟ್​ ಸೋಲ್​ನಲ್ಲಿ ಇತ್ತೀಚೆಗೆ ಕುಂಭಕರ್ಣ ಕಾಳಗ-ಕಾಳಿಂಗ ಮರ್ದನ ಯಕ್ಷಗಾನ ಪ್ರಸಂಗ ಪ್ರದರ್ಶಿಸಿದರು.

ಥಿಯೇಟರ್​ ಯಕ್ಷದ ಪೃಥ್ವೀರಾಜ ಕವತ್ತಾರು ನಿರ್ದೇಶಿಸಿದ ಈ ಪ್ರಸಂಗವನ್ನು ದೀವಟಿಗೆ ಬೆಳಕಿನಲ್ಲಿ ಪ್ರದರ್ಶಿಸಲಾಯಿತು. ಪ್ರಸಿದ್ಧ ರಂಗಕಲಾವಿದರಾದ ಕೀರ್ತನಾ ಕುಮಾರ್​ ಮತ್ತು ಕೋನಾರ್ಕ್​ ರೆಡ್ಡಿ ಈ ಯಕ್ಷಗಾನ ಸಂಯೋಜಿಸಿದ್ದರು.

ಶ್ರೀರಾಮ-ಲಕ್ಷ್ಮಣರ ಒಡ್ಡೋಲಗ

ರಾಮಾಯಣ ಮತ್ತು ಭಾಗವತ ಮಹಾಕಾವ್ಯಗಳಿಂದ ಆಯ್ದ ಕಥಾನಕ ಇದಾಗಿತ್ತು. ಒಂದೂವರೆ ಗಂಟೆ ಅವಧಿಯ ಪೂರ್ವರಂಗದೊಂದಿಗೆ ಮತ್ತು ಶ್ರೀರಾಮ-ಲಕ್ಷ್ಮಣರ ಪೂರ್ಣ ಒಡ್ಡೋಲಗ, ಸುಗ್ರೀವನ ಪಾರಂಪರಿಕ ಪ್ರವೇಶ, ಹನುಮಂತನ ತೆರೆ ಪೊರಪ್ಪಾಟ್​, ರಾವಣನ ನಿತ್ಯವಿಧಿ, ಕುಂಭಕರ್ಣನ ಸಾಂಪ್ರದಾಯಿಕ ನಡೆ, ಶೂರ್ಪನಖಾ ಪ್ರವೇಶ, ಕಾಳಿಂಗ-ಗರುಡ ಯುದ್ಧ ಕುಣಿತ ಇತ್ಯಾದಿ ಪಾರಂಪರಿಕ ಅಂಶಗಳೊಂದಿಗೆ, ಸಾಂಪ್ರದಾಯಿಕ ಘನತೆಯಲ್ಲಿ ಪ್ರದರ್ಶನ ಪ್ರಸ್ತುತ ಪಡಿಸಲಾಯಿತು.

UDP-24-1A-Yakshagana

ಹಿಮ್ಮೇಳದಲ್ಲಿ ಮಹೇಶ ಕನ್ಯಾಡಿ, ವಿಶ್ವಾಸ್​ ಕಾರ್ಬೆಟ್​, ಸ್ಕಂದ ಕೊನ್ನಾರ್​, ರಜನೀಶ ಪಡುಬಿದ್ರಿ, ಧೀರಜ್​ ಸಹಕರಿಸಿದರು. ಶಶಿಕಿರಣ ಕಾವು, ಶಂಭಯ್ಯ ಕಂರ್ಜಪಣೆ, ಸುನೀಲ್​ ಭಾಸ್ಕರ ಪಲ್ಲಮಜಲು, ನಾಗೇಶ್​ ಬೈಲೂರು, ಪವನ್​ದೇವ್​ ವೇಣೂರು, ಬಾಲಕೃಷ್ಣ ಮಿಜಾರು, ಲಕ್ಷ್ಮಣ ಮರಕಡ, ಸುರೇಶ್​ ಬಾಯಾರ್​, ಶಿವಾನಂದ ಪೆರ್ಲ, ಆದರ್ಶ ಮೂಡಬಿದ್ರಿ, ಶ್ರೀಶ ನಾರಾಯಣ ಹೆಗ್ಡೆ, ರಕ್ಷಿತ್​ ಗುಡ್ಡೆಯಂಗಡಿ, ಸಂತೋಷ್​ ಪಂಜಿಕಲ್​, ಅನ್ವೇಶ್​ ಬಂಟ್ವಾಳ್​ ವಿವಿಧ ಪಾತ್ರ ನಿರ್ವಹಿಸಿದರು. ಪ್ರಮೋದ್​, ಶಿವರಾಮ ಪಂಜ, ನಿತಿನ್​ ಪಡುಬಿದ್ರಿ ನೇಪಥ್ಯ ಕಲಾವಿದರಾಗಿ ನೆರವು ನೀಡಿದರು.

ನಾಟ್ಯಶಾಸ್ತ್ರದ ಸಂಶೋಧನೆಗೆ ಪೂರಕ

ಅಮೆರಿಕದ 30 ಕಲಾವಿದರು ಈ ಪ್ರದರ್ಶನವನ್ನು ವೀಕ್ಷಿಸಿದರು. ಭಾರತೀಯ ನಾಟ್ಯಶಾಸ್ತ್ರದ ಬಗ್ಗೆ ಅಧ್ಯಯನ ಮಾಡುತ್ತಿರುವ ಡಾ. ತಮಾಂಡಾ ಮಾತನಾಡಿ, ವಿಶಿಷ್ಟ ಯಕ್ಷಗಾನ ಪ್ರದರ್ಶನ ವೀಕ್ಷಿಸಿ ಭಾವುಕರಾಗಿದ್ದೇವೆ. ಭಾರತೀಯ ಸಾಂಪ್ರದಾಯಿಕ, ಪ್ರಾತಿನಿಧಿಕ ಪ್ರಕಾರವನ್ನು ನೈಜವಾಗಿಯೇ ಕಂಡ ಅನುಭವವಾಯಿತು. ಈ ಪ್ರದರ್ಶನ ನಾನು ಮಾಡುತ್ತಿರುವ ಸಂಶೋಧನೆಗೆ ಪೂರಕವಾಗಿದೆ ಎಂದರು. ಆರಂಭದಲ್ಲಿ ಪೃಥ್ವೀರಾಜ ಕವತ್ತಾರು ಯಕ್ಷಗಾನದ ಪ್ರಸಂಗದ ಸ್ಥೂಲ ಪರಿಚಯ ನೀಡಿದರು. ರಂಗಕಲಾವಿದರು ಯಕ್ಷಗಾನ ಕಲಾವಿದರೊಂದಿಗೆ ಸಂವಾದ ನಡೆಸಿದರು.

UDP-24-1B-Yakshagana
ಯಕ್ಷಗಾನ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ ಅಮೆರಿಕದ ಕಲಾವಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net