

ಮಂಗಳೂರು: ಅನೇಕ ಯಕ್ಷಗಾನ ಸಮ್ಮೇಳನಗಳ ರೂವಾರಿ, ಸಮರ್ಥ ಸಂಘಟಕ, ಯಕ್ಷಗಾನ ಅಕಾಡೆಮಿ ಸ್ಥಾಪನೆಗಾಗಿ ನಿರಂತರ ಹೋರಾಡಿದ ಹೋರಾಟಗಾರ, ಬಹುಮುಖ ಪ್ರತಿಭೆಯ ಕಲಾವಿದರಾಗಿ ಎಸ್.ಎನ್.ಪಂಜಾಜೆ ( ಸೂರ್ಯನಾರಾಯಣ ಪಂಜಾಜೆ ) ಗುರುತಿಸಿಕೊಂಡಿದ್ದರು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಬಣ್ಣಿಸಿದರು.
ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಯಕ್ಷಗಾನ ಸಾಹಿತ್ಯದಲ್ಲಿ ಬಹಳ ಸತ್ವವಿದೆ ಎಂಬ ಸತ್ಯವನ್ನು ಕಂಬಾರ, ಪಾಟೀಲ ಪುಟ್ಟಪ್ಪರಂತಹ ಹಿರಿಯ ಸಾಹಿತಿಗಳಿಗೂ ಮನವರಿಕೆ ಮಾಡಿದವರು ಪಂಜಾಜೆಯವರು ಎಂದರು.
ವಿದ್ವಾಂಸ ಡಾ.ಪ್ರಭಾಕರ ಜೋಷಿ ಮಾತನಾಡಿ, ಎಸ್.ಎನ್.ಪಂಜಾಜೆ ದೊಡ್ಡ ಸಾಧಕ, ಸಮರ್ಥ ಸಂಘಟಕ. ಸುಮಾರು 15 ಯಕ್ಷಗಾನ ಸಮ್ಮೇಳನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಸಾಮಾನ್ಯ ವಿಚಾರವಲ್ಲ. ದೊಡ್ಡಾಟ, ಸಣ್ಣಾಟ, ಪಾರಿಜಾತ ಮೊದಲಾದ ಯಕ್ಷಗಾನವನ್ನು ಸಮ್ಮೇಳನದಲ್ಲಿ ಸೇರಿಸಿ ಏಕಾಂಗಿಯಾಗಿ ದುಡಿದ ಕಲಾರಾಧಕ ಎಂದರು.
ಕಸಾಪ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಜಿ.ಕೆ. ಭಟ್ ಸೇರಾಜೆ, ಮಹಾಬಲ ಶೆಟ್ಟಿ ಹರಿದಾಸರು, ನಿತ್ಯಾನಂದ ಕಾರಂತ ಪೊಳಲಿ, ಭಾಸ್ಕರ ರೈ ಕುಕ್ಕುವಳ್ಳಿ, ಸುಧಾಕರ ರಾವ್ ಪೇಜಾವರ, ಜನಾರ್ದನ ಹಂದೆ, ಪಿ.ವಿ. ಪರಮೇಶ, ಅನಂತಕೃಷ್ಣ ಉಡುಪ, ತೋನ್ಸೆ ಪುಷ್ಕಳ ಕುಮಾರ್, ರವೀಂದ್ರನಾಥ್ ಪಿ.ಎಸ್., ಶಿವಪ್ರಸಾದ್ ಕಟ್ಟ, ಕೆ.ತಾರಾನಾಥ ಹೊಳ್ಳ, ಭಾಸ್ಕರ ರೈ ಕಟ್ಟ ಮೊದಲಾದವರು ಉಪಸ್ಥಿತರಿದ್ದು ದಿವಂಗತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.