ಯಕ್ಷಗಾನ ಸೀಸನ್ ಹೆಚ್ಚು ಹುರುಪು

Yakshagana F
Published on

ವೇಣುವಿನೋದ್ .ಕೆ.ಎಸ್.ಮಂಗಳೂರು

ಕಳೆದೆರಡು ವರ್ಷಗಳಲ್ಲಿ ಒಟ್ಟಾರೆ ಒಂದು ವರ್ಷದಷ್ಟು ಮಾತ್ರವೇ ತಿರುಗಾಟ ಮಾಡಿದ್ದ ಕರಾವಳಿಯ ಯಕ್ಷಗಾನ ಮೇಳಗಳು ಈ ಬಾರಿ ಹೊಸ ಹುರುಪಿನೊಂದಿಗೆ ತಿರುಗಾಟದ ಸಿದ್ಧತೆಯಲ್ಲಿವೆ.

2020ರಲ್ಲಿ ಕೋವಿಡ್ ಮೊದಲ ಅಲೆಯ ಬಳಿಕ ತಡವಾಗಿ ಅನಿಶ್ಚಿತತೆಯೊಂದಿಗೆ ತಿರುಗಾಟ ಶುರುವಾಗಿದ್ದು ಈ ವರ್ಷ ಕೋವಿಡ್ ಎರಡನೇ ಅಲೆಯ ಬೆದರಿಕೆಯಿಂದಾಗಿ ಒಂದು ತಿಂಗಳ ಮೊದಲೇ ಮೊಟಕುಗೊಂಡಿತ್ತು. ಈಗ ಕೋವಿಡ್ ಬಹುತೇಕ ಇಳಿಕೆ ಕಂಡಿದ್ದು, ಜನರೂ ಲಸಿಕೆ ಪಡೆದುಕೊಂಡ ಕಾರಣ ಯಕ್ಷಗಾನ ಮೇಳಗಳಲ್ಲಿ ಹೊಸ ಉತ್ಸಾಹ ಕಾಣಿಸಿಕೊಂಡಿದೆ.

ಬಹುತೇಕ ಎಲ್ಲ ಮೇಳಗಳೂ ನವೆಂಬರ್ ಕೊನೆಯವಾರದಿಂದ ಡಿಸೆಂಬರ್ ಎರಡನೇ ವಾರದ ಮಧ್ಯೆ ತಿರುಗಾಟ ಆರಂಭಿಸುವ ಸಾಧ್ಯತೆಗಳು ಕಂಡುಬಂದಿವೆ. ಕಳೆದ ಸಾಲಿನಲ್ಲಿ ಡಿಸೆಂಬರ್, ಜನವರಿ ತಿಂಗಳಲ್ಲಿ ತಡವಾಗಿ ಆಟ ಶುರುವಾದರೂ ಬಹುತೇಕ ಮೇಳಗಳು ಉತ್ತಮವಾಗಿಯೇ ತಿರುಗಾಟ ನಿರ್ವಹಿಸಿದ್ದವು, ಎಲ್ಲೆಡೆ ಸ್ಪಂದನೆ ಇತ್ತು. ಟೆಂಟ್ ಮೇಳಗಳಾದ ಸಾಲಿಗ್ರಾಮ ಹಾಗೂ ಪೆರ್ಡೂರು ಕೂಡಾ ಉತ್ತಮ ಸ್ಪಂದನೆ ಪಡೆದಿದ್ದವು. ಈ ಬಾರಿ ಜನರಿಗೆ ಲಸಿಕೆ ಆಗಿದೆ, ಕೋವಿಡ್ ಕೂಡಾ ಹಿನ್ನಡೆಯಲ್ಲಿದೆ ಹಾಗಾಗಿ ಉತ್ತಮ ಸೀಸನ್ ನಿರೀಕ್ಷೆಯಲ್ಲಿ ಮೇಳಗಳ ಯಜಮಾನರುಗಳಿದ್ದಾರೆ.

ಸಾಲಿಗ್ರಾಮ, ಹಿರಿಯಡ್ಕ, ಮಡಾಮಕ್ಕಿ, ಸೌಕೂರು ಹಾಗೂ ಹಾಲಾಡಿ ಮೇಳಗಳ ಯಜಮಾನ ಬೈಲೂರು ಕಿಶನ್ ಹೆಗ್ಡೆ ಅವರು ಡಿಸೆಂಬರ್ 15ರೊಳಗೆ ಎಲ್ಲವನ್ನೂ ಶುರು ಮಾಡುವ ಉದ್ದೇಶವಿದೆ ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಧರ್ಮಸ್ಥಳ ಮೇಳ ಕಾಲಮಿತಿಗೆ ಈಗಾಗಲೇ ಪರಿವರ್ತನೆಗೊಂಡಿದ್ದು ನವೆಂಬರ್ 10ಕ್ಕೆ ಕ್ಷೇತ್ರ ಸೇವೆ ಶುರುವಾಗಲಿದೆ. ಕರೊನಾ ಕಾರಣದಿಂದ ದೂರದೂರುಗಳ ಸೇವಾಕರ್ತರಿಗೆ ಸುಮಾರು 25 ದಿನ ಧರ್ಮಸ್ಥಳದಲ್ಲೇ ಸೇವೆಯಾಟ ಆಡಿಸಲು ಅವಕಾಶ ನೀಡಲಾಗುತ್ತಿದೆ. ಡಿ.5ಕ್ಕೆ ತಿರುಗಾಟ ಆರಂಭ ಎಂದು ಮೇಳದ ವ್ಯವಸ್ಥಾಪಕ ಗಿರೀಶ್ ಹೇಳಿದ್ದಾರೆ.

ಕೆಟ್ಟುಹೋದ ವೇಷಭೂಷಣ: ಆರು ಮೇಳಗಳನ್ನು ಹೊಂದಿರುವ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರೂ ನವೆಂಬರ್ 29ಕ್ಕೆ ಮೇಳ ಹೊರಡಿಸುವ ಉಮೇದಿನಲ್ಲಿದ್ದಾರೆ. ಕಟೀಲು ಮೇಳಗಳ ವೇಷಭೂಷಣಗಳಲ್ಲಿ ಶೇ.80ರಷ್ಟು ಕೆಟ್ಟಿವೆ. ಅರ್ಧಕ್ಕೇ ಆಟ ನಿಂತದ್ದರಿಂದ ಅದರ ನಿರ್ವಹಣೆ ಮಾಡಲಾಗದೆ ಕೆಟ್ಟು ಹೋಗಿರುವುದರಿಂದ ಹೊಸ ವೇಷಭೂಷಣ ಸಿದ್ಧಪಡಿಸಲಾಗುತ್ತಿದೆ. ಎಲ್ಲರೂ ಹೊರಡಲು ರೆಡಿಯಾಗಿದ್ದಾರೆ. ಮೂರನೇ ಅಲೆಯ ಹೆದರಿಕೆಯೂ ಇದೆ. ಲಸಿಕೆ ಆಗಿರುವುದು ಖುಷಿಯ ಸಂಗತಿ. ನ.29ಕ್ಕೆ ಹೊರಡಲು ಸಿದ್ಧತೆ ನಡೆದಿದೆ. ಕರೊನಾದಿಂದಾಗಿ ಅರ್ಧಕ್ಕೇ ನಿಂತು ಡ್ರೆಸ್ ಶೇ.80ರಷ್ಟು ಹಾಳಾಗಿದೆ. ಹಾಗಾಗಿ ಹೊಸ ವೇಷಭೂಷಣ ರೆಡಿ ಮಾಡಲಾಗುತ್ತಿದೆ.

ಬುಕಿಂಗ್ ನಿಧಾನ: ಅನೇಕ ಮೇಳಗಳಲ್ಲಿ ಸೇವಾಕರ್ತರು ಬುಕಿಂಗ್ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಕಳೆದ ವರ್ಷ ಕರೊನಾದಿಂದಾಗಿ ಆಟಗಳು ದಿಢೀರ್ ರದ್ದಾಗಿರುವುದು, ಹಲವು ರೀತಿಯ ನಿಯಮಾವಳಿ ಬಂದಿದ್ದರಿಂದ ಸೇವಾಕರ್ತರು ಇನ್ನೂ ಧೈರ್ಯ ಮಾಡುತ್ತಿಲ್ಲ ಎನ್ನುವುದು ಮೇಳದ ಯಜಮಾನರುಗಳ ಹೇಳಿಕೆ. ಕೆಲವು ಮಂದಿ ಬುಕ್ ಮಾಡಿದವರು ಆಟ ಆಡಿಸಲು ಕೇಳಿದಾಗ ಈಗ ಬೇಡ ಒಂದು ವರ್ಷ ನಂತರ ನೋಡೋಣ ಎಂದು ಮುಂದೂಡಿದ್ದೂ ಇದೆ. ಗೌಜಿ ಆಟ ಆಡಿಸಲು ನಿರ್ಬಂಧ ಇದ್ದ ಕಾರಣ ಸೇವಾಕರ್ತರು ಆಟ ಮುಂದೂಡಿದ್ದ ಅನೇಕ ನಿದರ್ಶನಗಳು ಕಳೆದ ಸಾಲಿನಲ್ಲಿದ್ದವು.

ನವೆಂಬರ್ 29ಕ್ಕೆ ಸೌಕೂರು ಮೇಳ, ಡಿ.6ಕ್ಕೆ ಮಡಾಮಕ್ಕಿ, 9ಕ್ಕೆ ಹಿರಿಯಡ್ಕ ಮೇಳ ಶುರು ಮಾಡುವುದೆಂದು ನಿರ್ಧರಿಸಲಾಗಿದೆ. ಉಳಿದ ಮೇಳಗಳ ದಿನಾಂಕ ನಿಗದಿಯಾಗಿಲ್ಲ.

- ಪಿ. ಕಿಶನ್ ಹೆಗ್ಡೆ ಯಜಮಾನ, ಸಾಲಿಗ್ರಾಮ ಮೇಳ

ಕಳೆದ ವರ್ಷ ಕಟೀಲು ಮೇಳಗಳಿಗೆ ಪೂರ್ಣ ತಿರುಗಾಟ ಸಾಧ್ಯವಾಗಿರಲಿಲ್ಲ. ಸರ್ಕಾರದ ನಿಯಮ ನೋಡಿಕೊಂಡು ಈ ಬಾರಿ ಹೊರಡಲು ಸಿದ್ಧತೆ ನಡೆಯುತ್ತಿದೆ.

ಶ್ರೀಹರಿದಾಸ ಆಸ್ರಣ್ಣ ಕಟೀಲು ಕ್ಷೇತ್ರದ ಅರ್ಚಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net