ಕಲೆ, ಸಂಸ್ಕೃತಿ ರಕ್ಷಣೆಗಾಗಿ ಮಹಾಭಿಯಾನ...

Yakshagana
Published on

ಶಾಸಕ ಯಶ್​ಪಾಲ್​ ಸುವರ್ಣ ಶ್ಲಾಘನೆ

ಉಡುಪಿಯಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಯಕ್ಷಗಾನವು ಕರಾವಳಿ ಭಾಗದ ಸಂಪದ್ಭರಿತ ಕಲೆಯಾಗಿದ್ದು ಇಲ್ಲಿನ ಸಂಸ್ಕೃತಿಯ ಪ್ರತೀಕವೂ ಆಗಿದೆ. ಪಾಶ್ಚಾತ್ಯ ಕಲೆಗಳಿಂದ ದೇಶದ ವಿವಿಧ ಕಲೆ ಅವನತಿ ಹೊಂದಿದ್ದರೂ ಯಕ್ಷಗಾನ ಬೆಳಗುತ್ತಲೇ ಇದೆ. ಉಡುಪಿಯ ಯಕ್ಷಗಾನ ಕಲಾರಂಗದ ಸಹಕಾರದಿಂದ ಕಲೆ, ಸಂಸ್ಕೃತಿಯ ರಕ್ಷಣೆಗಾಗಿ ವಿದ್ಯಾರ್ಥಿಗಳಿಗೂ ಕಲೆಯ ತರಬೇತಿ ನೀಡಲು ಯಶಸ್ವಿಯಾಗಿ ಮಹಾಭಿಯಾನ ಮುಂದುವರಿದಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಶ್ಲಾಘಿಸಿದರು.

ಉಡುಪಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸಭಾಭವನದಲ್ಲಿ ಆಗಸ್ಟ್​ 1ರಂದು ಯಕ್ಷಗಾನ ಕಲಿಕಾ ತರಗತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯ 94 ಶಾಲೆಗಳಲ್ಲಿ ತರಬೇತಿ

ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್​ (ರಿ.)ನ ಕಾರ್ಯದರ್ಶಿ ಮುರಳಿ ಕಡೆಕಾರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ವರ್ಷ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 94 ಶಾಲೆಗಳಲ್ಲಿ ಯಕ್ಷ ಶಿಕ್ಷಣ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಈ ಕಾರ್ಯಕ್ರಮ 18 ವರ್ಷದಿಂದ ನಿರಂತರ ಸಾಗಿಬಂದಿದೆ. ಈ ಶಾಲೆಯಲ್ಲಿ ಒಟ್ಟು 60 ವಿದ್ಯಾರ್ಥಿನಿಯರು ಯಕ್ಷ ಶಿಕ್ಷಣ ಪಡೆಯಲಿದ್ದಾರೆ ಎಂದು ತಿಳಿಸಿದರು.

ದಾನಿ ಡಾ. ಬಿ. ಜಿ.ಆಚಾರ್ಯ ಯಕ್ಷ ಶಿಕ್ಷನ ತರಗತಿ ಉದ್ಘಾಟಿಸಿ ಮಾತನಾಡಿ, ಬಾಲ್ಯದಲ್ಲಿ ಯಕ್ಷಗಾನವು ತಮ್ಮಮೇಲೆ ಬೀರಿದ್ದ ಪ್ರಭಾವ ನೆನಪಿಕೊಂಡರು.

ಎಸ್​ಡಿಎಂಸಿ ಗೌರವಾಧ್ಯಕ್ಷೆ ತಾರಾದೇವಿ, ಸಂಸ್ಥೆಯ ಟ್ರಸ್ಟಿಗಳಾದ ನಾರಾಯಣ ಎಂ. ಹೆಗಡೆ, ಮೀನಾಲಕ್ಷಣಿ ಅಡ್ಯಂತಾಯ, ಯಕ್ಷಗಾನ ಗುರುಗಳಾದ ನಿರಂಜನ್​ ಭಟ್​, ಆದ್ಯತಾ ಭಟ್​, ಎಸ್​ಡಿಎಂಸಿ ಅಧ್ಯಕ್ಷೆ ನವ್ಯಾ ನಾಯಕ ಉಪಸ್ಥಿತರಿದ್ದರು.

ಆರಂಭದಲ್ಲಿ ಯಕ್ಷಗಾನ ವಿದ್ಯಾರ್ಥಿಗಳು ಗಣಪತಿ ಸ್ತುತಿಗೆ ಸುಂದರವಾಗಿ ಹೆಜ್ಜೆ ಹಾಕಿದರು. ಯಕ್ಷ ಶಿಕ್ಷಣ ಸನಿವಾಸ ಶಿಬಿರದಲ್ಲಿ ಪಾಲ್ಗೊಂಡಿದ್ದ ಅವನಿ ಮತ್ತು ಭೈರವಿ ಸವಿನೆನಪು ಹಂಚಿಕೊಂಡರು. ಶಾಲೆಯ ಮುಖ್ಯೋಪಾಧ್ಯಾಯಿನಿ ಇಂದಿರಾ ಸ್ವಾಗತಿಸಿದರು. ಶಿಕ್ಷಕರಾದ ರಾಘವೇಂದ್ರ ಭಟ್​ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಮೋಹಿನಿ ಎಂ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net