

ದಾವಣಗೆರೆ: ರಾಜ್ಯದಲ್ಲಿ ಯಕ್ಷಗಾನ ಕಲೆ ಜೀವಂತಿಕೆ ಇರುವವರೆಗೆ ಕನ್ನಡ ಉಳಿಯಲಿದೆ. ಆದ್ದರಿಂದ ಯಕ್ಷಗಾನದಲ್ಲಿ ಆಂಗ್ಲ ಭಾಷೆ ಬಳಸುವಂತಿಲ್ಲ. ಒಂದೊಮ್ಮೆ ಬಳಸಿದರೆ ಅದರ ಅಸ್ತಿತ್ವವೇ ಕಳೆದು ಹೋಗಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಹೇಳಿದರು.
ನಗರದ ಸಿದ್ದಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ಕೌಸ್ತುಭ ‘ಸರಸ್ವತಿ ಪುರಸ್ಕಾರ’ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡಕ್ಕೆ ಉದಾರತೆ, ಔದಾರ್ಯತೆ ಇದೆ. ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡ ನಶಿಸಿದೆ. ನಮ್ಮಲ್ಲಿ ಮಾತೃಭಾಷೆ ಪ್ರಭುತ್ವ ಇದ್ದರೆ ಯಾರಿಗೂ ಹೆದರಬೇಕಾಗಿಲ್ಲ. ಇಂಗ್ಲಿಷ್ ಎಂದರೆ ಕಿರೀಟ ಎನ್ನುವ ಭ್ರಮೆ ಇದೆ. ವಿಶ್ವವಿದ್ಯಾನಿಲಯಗಳು ಆಧುನಿಕ ಶಿಕ್ಷಣದ ಸುನಾಮಿಯಲ್ಲಿ ಕನ್ನಡ ಭಾಷೆ ತನ್ನತನ ಕಳೆದುಕೊಳ್ಳುತ್ತಿದೆ. ಡ್ಯಾಡಿ, ಮಮ್ಮಿ ಎನ್ನುವ ಆಂಗ್ಲ ಭಾಷೆ ವ್ಯಾಮೋಹ ತೊರೆದು ಅಪ್ಪ, ಅಮ್ಮ ಎನ್ನುವ ನಮ್ಮತನಕ್ಕೆ ಬರಬೇಕಿದೆ ಎಂದರು.
ಕೇರಳ ಮಂಗಲ್ಪಾಡಿಯ ಹಿರಿಯ ಯಕ್ಷಗಾನ ಸಾಹಿತಿ ಜಯಲಕ್ಷ್ಮಿ ಕಾರಂತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡವನ್ನು ಇಂಗ್ಲಿಷ್ ಎನ್ನುವ ಇಟ್ಟಿಗೆಯಿಂದ ಕಟ್ಟುವ ಕೆಲಸ ಕೆಲ ಪಾಲಕರು ಮಾಡುತ್ತಿದ್ದಾರೆ. ಕನ್ನಡ ಅನ್ನದ ಭಾಷೆಯಲ್ಲ, ಅದು ಹೃದಯದ ಭಾಷೆ. ನಮಗೆ ನೋವಾದಾಗ ಮೊದಲು ಹೇಳುವುದು ಅಮ್ಮ ಎಂದು, ಅಂತೆಯೇ ನಮ್ಮ 2ನೇ ಪದ ಕನ್ನಡ ಎನ್ನುವಂತಾಗಲಿ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಈ ಹಿಂದೆ ಕನ್ನಡದಲ್ಲಿ ಹೆಚ್ಚು ಅಂಕ ಗಳಿಸುವುದು ಕಷ್ಟ ಎನ್ನಲಾಗುತ್ತಿತ್ತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ. ಸಂಸ್ಕೃತ, ಇಂಗ್ಲಿಷ್ ಭಾಷೆಗಳೇ ಶ್ರೇಷ್ಠ ಎನ್ನುವ ಕಾಲ ಹೋಗಿ ಇವೆಲ್ಲವನ್ನೂ ಮೀರಿ ಇಂದು ಕನ್ನಡ ಬೆಳೆದಿದೆ. ಮ್ಯಾಂಚೆಸ್ಟರ್ ಸಿಟಿಯಾಗಿದ್ದ ದಾವಣಗೆರೆ ಇದೀಗ ವಿದ್ಯಾಕಾಶಿ ಅಗಿ ಬದಲಾಗುತ್ತಿದೆ ಎಂದರು.
ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಡಾ.ಡಿ.ಎಸ್.ಜಯಂತ್, ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಅಧ್ಯಕ್ಷ ಮಂಜುನಾಥ ಶೆಣೈ, ಹೇಮ ಶಾಂತಪ್ಪ ಪೂಜಾರಿ, ಜ್ಯೋತಿ ಶೆಣೈ, ವಸಂತ ಮಂಜುನಾಥ ಇತರರಿದ್ದರು.