

ಉಡುಪಿ: ಯಕ್ಷಗಾನ ಜಗತ್ತಿನಲ್ಲೆ ಅತ್ಯಂತ ಪರಿಪೂರ್ಣ ಕಲಾ ಪ್ರಕಾರವಾಗಿದೆ. ಬೇರೆ ಯಾವುದೇ ಕಲಾ ಪ್ರಕಾರಗಳ ಆಯೋಜನೆಗೆ ಹರಕೆ ಹೇಳುವ ಪದ್ಧತಿಗಳಿಲ್ಲ. ಹೀಗಾಗಿ ಯಕ್ಷಗಾನ ಪುಣ್ಯಪ್ರದ ದೈವೀ ಕಲೆಯಾಗಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಶುಕ್ರವಾರ ಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗ ಆಯೋಜಿಸಿದ 25ನೇ ವರ್ಷದ ಕಲಾವಿದರ ಸಮಾವೇಶದಲ್ಲಿ ಅನುಗ್ರಹ ಸಂದೇಶ ನೀಡಿದರು. ಯಕ್ಷಗಾನ ಕಲಾವಿದರು ಸಮಾಜಕ್ಕೆ ಪುರಾಣದ ಸಂದೇಶವನ್ನು ತಿಳಿಸುವ ಶ್ರೇಷ್ಠ ವಿದ್ವಾಂಸರಾಗಿದ್ದು, ಇದರಿಂದ ಸಮಾಜದಲ್ಲಿ ಪೌರಾಣಿಕ ಕಥೆ, ಧಾರ್ಮಿಕ ವಿಚಾರಗಳು ಉಳಿದಿವೆ. ಇಲ್ಲದಿದ್ದರೆ ಸಾಮಾನ್ಯ ಜನರಿಗೆ ಧಾರ್ಮಿಕ ಕಥೆಗಳು ತಿಳಿಯುತ್ತಿರಲಿಲ್ಲ. ಇಂಥ ಯಕ್ಷಗಾನ ಕಲೆಗೆ ವಿಶ್ವಮಾನ್ಯತೆ ಲಭಿಸಲಿ ಎಂದು ಹಾರೈಸಿದರು.
ಸುಬ್ರಹ್ಮಣ್ಯ ಬೈಪಡಿತ್ತಾಯರು ಬರೆದ ಆಗಸದ ಬೆಳಕು ಪುಸ್ತಕವನ್ನು ಶ್ರೀಪಾದರು ಲೋಕಾರ್ಪಣೆಗೊಳಿಸಿದರು. ವೃತ್ತಿಮೇಳದ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ ಆಗುಂಬೆಯ ಗುರುರಾಜ ಅಡಿಗ ಮತ್ತು ಕೊಕ್ಕರ್ಣೆಯ ಕೆ. ಎಸ್. ಶ್ರೀನಿವಾಸ ನಾಯಕ್ ಇವರನ್ನು ಶ್ರೀಪಾದರು ಗೌರವಿಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಯಕ್ಷಗಾನದ ಮೇಲಿನ ಪ್ರೀತಿಯಿಂದಾಗಿ ಸಂಸ್ಥೆಯ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕಲಾವಿದರ ಕಷ್ಟ&ಸುಖಗಳಿಗೆ ಬಹಳಷ್ಟು ಸ್ಪಂದನೆ ಮಾಡಿದ್ದೇನೆ. ಜಾನಪದ ಕಲೆ ಹಾಗೂ ಕುಣಿತ ಭಜನೆ ಸೇರಿದಂತೆ ಅನೇಕ ಕಲಾಪ್ರಕಾರಗಳ ಉಳಿಸಲು ಪ್ರೋತ್ಸಾಹ ನೀಡಲಾಗುತ್ತಿದ್ದು, ಅಕಾಡೆಮಿ ಮೂಲಕ ಇನ್ನಷ್ಟು ಸೇವೆ ಮಾಡುವ ಅವಕಾಶ ಲಭಿಸಿದೆ ಎಂದು ಹೇಳಿದರು.
ಇತ್ತೀಚೆಗೆ ನಿಧನರಾದ ಪುತ್ತೂರು ಗಂಗಾಧರ ಜೋಗಿಯವರ ಪತ್ನಿಗೆ ಸಾಂತ್ವನ ನಿಧಿಯನ್ನು ನೀಡಲಾಯಿತು. 21 ಜನ ಕಲಾವಿದರಿಗೆ ತಲಾ ಹತ್ತು ಸಾವಿರದಂತೆ ಗೃಹ ನಿಮಾರ್ಣದ ಉಡುಗೊರೆ ಹಾಗೂ 7 ಮಂದಿ ಕಲಾವಿದರಿಗೆ ವೈದ್ಯಕಿಯ ನೆರವು ವಿತರಿಸಲಾಯಿತು. ವೇದಿಕೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ಉದ್ಯಮಿಗಳಾದ ಆನಂದ ಸಿ. ಕುಂದರ್, ಪಿ. ಪುರುಷೋತ್ತಮ ಶೆಟ್ಟಿ, ಬೆಳ್ವೆ ಗಣೇಶ್ ಕಿಣಿ, ಸುರೇಶ್ ನಾಯಕ್ ಕುಯಿಲಾಡಿ, ಸಿಎ ಗಣೇಶ್ ಕಾಂಚನ್, ಹರಿಯಪ್ಪ ಕೋಟ್ಯಾನ್ ಅಭ್ಯಾಗತರಾಗಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಬೆಳಗ್ಗೆ ಮಠದ ದಿವಾನ ನಾಗರಾಜ ಅಚಾರ್ಯ ಸಮಾವೇಶವನ್ನು ಉದ್ಘಾಟಿಸಿದರು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ವೈದ್ಯಕಿಯ ತಪಾಸಣೆ ನಡೆಯಿತು.