ಏ.21ಕ್ಕೆ ಯಕ್ಷಗಾನ ಕಲಾರಂಗ ನೂತನ ಕಟ್ಟಡ ಉದ್ಘಾಟನೆ

WhatsApp Image 2024-04-15 at 4.54.54 PM
Published on

ಉಡುಪಿ: ಶಾರದಾ ಕಲ್ಯಾಣ ಮಂಟಪ ರಸ್ತೆಯಲ್ಲಿ ನಿರ್ಮಿಸಲಾದ ಯಕ್ಷಗಾನ ಕಲಾರಂಗದ ನೂತನ ಕಟ್ಟಡ ಇನ್​ಫೋಸಿಸ್​ ಫೌಂಡೇಶನ್​ ಯಕ್ಷಗಾನ ಡೆವಲಪ್​ಮೆಂಟ್​, ಟೆನಿಂಗ್​ ಮತ್ತು ರಿಸರ್ಚ್​ ಸೆಂಟರ್​ (ಐವೈಸಿ) ಏ.21ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳೀ ಕಡೆಕಾರ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏ.21ರಂದು ಬೆಳಗ್ಗೆ 9ಕ್ಕೆ ಕೃಷ್ಣ ಮಠದಿಂದ ಪರ್ಯಾಯ ಮಠಾಧೀಶ ಶ್ರೀ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಮತ್ತು ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಅನುಗ್ರಹ ಮಂತ್ರಾಕ್ಷತೆ ಹಾಗೂ ಕೃಷ್ಣ ಪ್ರತಿಮೆ ಪಡೆದು ಯಕ್ಷಗಾನ ಪರಿಕರಗಳೊಂದಿಗೆ ನೂತನ ಕಟ್ಟಡಕ್ಕೆ ಸದಸ್ಯರು ಆಗಮಿಸಲಿದ್ದಾರೆ. 10 ಗಂಟೆಗೆ ನೂತನ ಕಟ್ಟಡದ ದ್ವಾರಪೂಜೆ ನಡೆಯಲಿದ್ದು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಹೊಸ ಸಭಾಂಗಣದಲ್ಲಿ ಯಕ್ಷಗಾನ ನರ್ತನ ಸೇವೆ ನಡೆಯಲಿದ್ದು, ನಂತರ ಕಟ್ಟಡದ ಹಿಂಭಾಗ ನಿರ್ಮಿಸಿದ ಶ್ರೀ ವಿಶ್ವೇಶ ತೀರ್ಥ ವೇದಿಕೆಯಲ್ಲಿ ಸಭಾ ಕಾರ್ಯಕ್ರಮವನ್ನು ಇನ್​ಫೋಸಿಸ್​ ಫೌಂಡೇಶನ್​ ವಿಶ್ವಸ್ಥ ಸುನಿಲ್​ ಕುಮಾರ್​ ಧಾರೇಶ್ವರ್​ ಉದ್ಘಾಟಿಸಲಿದ್ದಾರೆ. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದಾರೆ. ಮಾಹೆ ಸಹಕುಲಾಧಿಪತಿ ಡಾ. ಎಚ್​. ಎಸ್​. ಬಲ್ಲಾಳ್​ ಅಧ್ಯಕ್ಷತೆ ವಹಿಸಲಿದ್ದಾರೆ. ಅಂಬಲಪಾಡಿ ದೇವಸ್ಥಾನ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳ್​ ಶುಭಾಸಂಶನೆಗೈಯಲಿದ್ದಾರೆ. ಜಿ.ಶಂಕರ್​ ್ಯಾಮಿಲಿ ಟ್ರಸ್ಟ್​ ಪ್ರವರ್ತಕ ಡಾ. ಜಿ. ಶಂಕರ್​, ಉದ್ಯಮಿ ರಮೇಶ್ಚಂದ್ರ ಹೆಗ್ಡೆ ಮುಖ್ಯ ಅತಿಥಿಯಾಗಿರುವರು ಎಂದರು.

ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಏ.20ರಂದು ಬೆಳಗ್ಗೆ ಚೇರ್ಕಾಡಿಯಲ್ಲಿ ವಿದ್ಯಾಪೋಷಕ್​ ವಿದ್ಯಾರ್ಥಿನಿಗೆ ದಾನಿ ಪಿ. ಪುರೋಷತ್ತಮ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಯಕ್ಷಗಾನ ಕಲಾರಂಗ ನಿರ್ಮಿಸಿಕೊಟ್ಟ 52ನೇ ಮನೆಯ ಉದ್ಘಾಟನೆ ಹಾಗೂ ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್​, ಉಪಾಧ್ಯಕ್ಷ ಕಿಶನ್​ ಹೆಗ್ಡೆ ಪಳ್ಳಿ, ಎಸ್​.ವಿ.ಭಟ್​, ವಿ.ಜಿ. ಶೆಟ್ಟಿ, ಪದಾಧಿಕಾರಿಗಳಾದ ನಾರಾಯಣ ಹೆಗಡೆ, ಸದಾಶಿವ ರಾವ್​, ಭುವನಪ್ರಸಾದ್​ ಹೆಗ್ಡೆ, ಅನಂತರಾಜ್​ ಉಪಾಧ್ಯ, ಅಶೋಕ್​ ಎಂ., ಮೊದಲಾದವರು ಉಪಸ್ಥಿತರಿದ್ದರು.

1975ರಲ್ಲಿ ಸ್ಥಾಪನೆಯಾದ ಯಕ್ಷಗಾನ ಕಲಾರಂಗ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ. 1200ಕ್ಕೂ ಹೆಚ್ಚು ಅಜೀವ ಸದಸ್ಯರನ್ನು ಹೊಂದಿರುವ ಸಂಸ್ಥೆ ಯಕ್ಷನಿಧಿ, ವಿದ್ಯಾಪೋಷಕ್​, ಯಕ್ಷ ಶಿಕ್ಷಣ. ಹೀಗೆ 3 ಆಯಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಶರದಾ ಕಲ್ಯಾಣ ಮಂಟಪ ರಸ್ತೆಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಸಂಸ್ಥೆ ಖರೀಸಿದ 35 ಸೆಂಟ್ಸ್​ ಜಾಗದಲ್ಲಿ ಇನ್​ಫೋಸಿಸ್​ ಫೌಂಡೇಶನ್​ 15.8 ಕೋಟಿ ರೂ. ವೆಚ್ಚದಲ್ಲಿ 30000 ಚದರಡಿಯ ನೂತನ ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ. ಬೇಸ್ಮೆಂಟ್ನಲ್ಲಿ ಅಡುಗೆ ಮನೆ, ಭೋಜನ ಶಾಲೆ, ಸೆಕ್ಯೂರಿಟಿ ವಾಸ್ತವ್ಯ ಕೊಠಡಿ, ನೆಲಅಂತಸ್ತಿನಲ್ಲಿ 266 ಆಸನಗಳ ಸುಸಜ್ಜಿತ ಸಭಾಂಗಣ, ಮೊದಲ ಮಹಡಿಯಲ್ಲಿ 122 ಆಸನಗಳ ಬಾಲ್ಕನಿ, ಹಿಂಭಾಗದಲ್ಲಿ ಕಲಾರಂಗದ ಕಚೇರಿ, 2ನೇ ಅಂತಸ್ತಿನಲ್ಲಿ 60 ಆಸನ ಸಾಮಥ್ಯದ ಕಾನ್ಫರೆನ್ಸ್​ ರೂಂ, ಬೋರ್ಡ್​ ರೂಂ, ಲೈಬ್ರೇರಿ, ರಿಸರ್ಚ್​ ಸೆಂಟರ್​ ಕೊಠಡಿ, 5 ಬೆಡ್​ ರೂಂಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net