

ಉಡುಪಿ: ಯಕ್ಷಗಾನ ವಿದ್ವಾಂಸರನ್ನು ಗುರುತಿಸುವ ನಿಟ್ಟಿನಲ್ಲಿ ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿಯನ್ನು 2013ರಲ್ಲಿ ಪ್ರಾರಂಭಿಸಲಾಗಿದ್ದು, ಈವರೆಗೆ 12ಕ್ಕೂ ಅಧಿಕ ವಿದ್ವಾಂಸರನ್ನು ಗೌರವಿಸಲಾಗಿದೆ ಎಂದು ತಲ್ಲೂರು ಟ್ರಸ್ಟ್ ಪ್ರವರ್ತಕ ಹಾಗೂ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಭಾನುವಾರ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ತಲ್ಲೂರು ಕನಕಾ&-ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಸ್ಪಹ ಕಾರ್ಯಕರ್ತರ ತಂಡ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಯಾವುದೇ ಸಂಸ್ಥೆ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಯಕ್ಷಗಾನ ಕಲಾರಂಗ ಮಾದರಿಯಾಗಿದ್ದು, ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ. ಗುರುರಾಜ ಮಾರ್ಪಳ್ಳಿ ಅವರು ಪ್ರಸಿದ್ಧಿಯ ಗೊಡವೆಯೇ ಇಲ್ಲದೆ ಸಾಧನೆ ಮಾಡಿರುವ ಅಪರೂಪದ ವ್ಯಕ್ತಿ ಎಂದು ಹೇಳಿದರು. ಈ ಸಂದರ್ಭದಲ್ಲಿ 40 ಸಾವಿರ ನಗದು ಪುರಸ್ಕಾರಗಳನ್ನೊಳಗೊಂಡ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಬಹುಮುಖೀ ಕಲಾ ಸಾಧಕ ಗುರುರಾಜ ಮಾರ್ಪಳ್ಳಿ ಅವರಿಗೆ ಪ್ರದಾನ ಮಾಡಲಾಯಿತು.
ಹಿರಿಯ ವಿದ್ವಾಂಸ ಪ್ರ್ರೊ. ಎಂ.ಎಲ್. ಸಾಮಗ ಅಭಿನಂದನ ಭಾಷಣ ಮಾಡಿ, ಗುರುರಾಜ ಮಾರ್ಪಳ್ಳಿಯವರು ಸದಾ ಪ್ರಯೋಗಶೀಲತೆಗೆ ಮತ್ತೊಂದು ಹೆಸರು. ವಿಲಕ್ಷಣ ವ್ಯಕ್ತಿತ್ವ ಹೊಂದಿರುವ ಅವರು ಎಲ್ಲಾ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡು ತನ್ನದೇ ಆದ ಛಾಪು ಮೂಡಿಸಿದ್ದಾರೆ ಎಂದರು.
ಹಿರಿಯ ಪ್ರಸಂಗಕರ್ತ ಶ್ರೀಧರ ಡಿ. ಎಸ್. ಅಭ್ಯಾಗತರಾಗಿದ್ದರು. ಟ್ರಸ್ಟ್ನ ಗಿರಿಜಾ ಶಿವರಾಮ ಶೆಟ್ಟಿ , ಕಾರ್ಯದರ್ಶಿ ಮುರಲಿ ಕಡೆಕಾರ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ಬಳಿಕ ಗುರುರಾಜ ಮಾರ್ಪಳ್ಳಿಯವರ ನಿರೂಪಣೆಯಲ್ಲಿ ಯಕ್ಷಗಾನ ಭಾಗವತಿಕೆ -ಗಮಕಗಳ ಸಂಶೋಧನಾತ್ಮಕ ಅಧ್ಯಯನ ಪ್ರಸ್ತುತಿಪಡಿಸಲಾಯಿತು. ಭಾಗವತರಾಗಿ ಶಶಿಕಿರಣ್ ಮಣಿಪಾಲ್, ಮದ್ದಲೆ ವಾದಕರಾಗಿ ಕೂಡ್ಲಿ ದೇವದಾಸ್ ರಾವ್, ಗಮಕ ವಿಶ್ಲೇಷಣಗಾರರಾಗಿ ಅರವಿಂದ ಹೆಬ್ಬಾರ್, ರವಿಕಿರಣ್ ಮಣಿಪಾಲ ಭಾಗವಹಿಸಿದ್ದರು.