

ಉಡುಪಿ: ಯಕ್ಷಗಾನದ ಜೀವಂತಿಕೆಗೆ ಹಿರಿಯ ಕಲಾವಿದರು ಭದ್ರ ಬುನಾದಿ ಹಾಕಿದ್ದಾರೆ. ಹೀಗಾಗಿ ರಂಗದ ಶ್ರೇಷ್ಠತೆಗೆ ಕೊರತೆಯಾಗಿಲ್ಲ. ಯುವಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರಂಗಕ್ಕೆ ಪ್ರವೇಶಿಸುತ್ತಿದ್ದು, ಇದರ ಮೂಲ ಸ್ವರೂಪ ಮತ್ತು ಹಿರಿಯರ ತತ್ವ&ಆದರ್ಶಕ್ಕೆ ಅಪಚಾರವಾಗದಂತೆ ನೋಡಿಕೊಳ್ಳಬೇಕು ಎಂದು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಳದ ಧರ್ಮಕರ್ತೃ ಡಾ. ಜಿ. ಭೀಮೇಶ್ವರ ಜೋಶಿ ಹೇಳಿದರು.
ಐವೈಸಿ ಸಭಾಭವನದಲ್ಲಿ ಶನಿವಾರ ಕಲಾಸಕ್ತ ಮಟ್ಟಿ ಮುರಳೀಧರ ರಾವ್ ಮತ್ತು ಹಿರಿಯ ಅರ್ಥಧಾರಿ ಪೆರ್ಲ ಕೃಷ್ಣ ಭಟ್ಟರ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರ್ಥಿಕ ಅನುಕೂಲತೆ ಹಾಗೂ ಚಪ್ಪಾಳೆಗೋಸ್ಕರ ಯಕ್ಷಗಾನ ವೇದಿಕೆ ಬಳಸಿಕೊಳ್ಳಬಾರದು. ಕಲಾವಿದರು ಬದ್ಧತೆ ಇಟ್ಟುಕೊಳ್ಳಬೇಕು.ಮೇಳದ ಯಜಮಾನರೂ ಈ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣ ಪ್ರಸಾದ್ ಅಡ್ಯಂತಾಯ, ಮೇಳದ ಯಜಮಾನ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್, ಎಸ್.ವಿ. ಭಟ್ ಅಭ್ಯಾಗತರಾಗಿದ್ದರು. ಈ ಸಂದರ್ಭದಲ್ಲಿ ಹಿರಿಯ ಅರ್ಥಧಾರಿ ಡಾ. ಜಿ. ಎಲ್. ಹೆಗಡೆ ಕುಮಟಾ ಅವರಿಗೆ ಮಟ್ಟಿ ಮುರಳೀಧರ ರಾವ್ ಮತ್ತು ಸರ್ಪಂಗಳ ಈಶ್ವರ ಭಟ್ ಇವರಿಗೆ ಪೆರ್ಲ ಕೃಷ್ಣ ಭಟ್ಟ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.