ಯಕ್ಷಗಾನ ವಿಶ್ವದ ಸಮೃದ್ಧ ಕಲೆ ಎಸ್‌ಡಿಎಂ ಯಕ್ಷೋತ್ಸವ ಉದ್ಘಾಟಿಸಿ ಹೈಕೋರ್ಟ್ ವಕೀಲ ಸುಧಾಕರ ಪೈ ಅಭಿಮತ

mng--22 march SDM yakshotsava
Published on

ಮಂಗಳೂರು: ತ್ರೇತಾ ಯುಗದ ರಾಮನ ನಡೆಯನ್ನು, ದ್ವಾಪರ ಯುಗದ ಕೃಷ್ಣನ ನುಡಿಯನ್ನು ಕಲಿಯುಗದ ಜನಮಾನಸಕ್ಕೆ ಪ್ರಸ್ತುತ ಪಡಿಸುವ ಯಕ್ಷಗಾನ ವಿಶ್ವದ ಏಕೈಕ ಸಮೃದ್ಧ ಕಲೆ ಎಂದು ಹೈಕೋರ್ಟ್ ಹಿರಿಯ ವಕೀಲ ಎಂ.ಸುಧಾಕರ ಪೈ ಅಭಿಪ್ರಾಯ ಪಟ್ಟರು.

ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ 33ನೇ ವರ್ಷದ ಸಾಂಪ್ರದಾಯಿಕ ಯಕ್ಷಹಬ್ಬ ಯಕ್ಷೋತ್ಸವ-2025 ಉದ್ಘಾಟಿಸಿ, ಅವರು ಮಾತನಾಡಿದರು.

ಕೇರಳದ ಕಥಕ್ಕಳಿ, ಆಂದ್ರಪ್ರದೇಶದ ಭಾಮಾ ವಿಲಾಸ ಮೊದಲಾದ ರಾಜ್ಯಗಳ ಸಮಕಾಲೀನ ಕಲೆಗಳಂತೆ ಕರಾವಳಿಯಲ್ಲಿ ಯಕ್ಷಗಾನ ಮೇಳೈಸುತ್ತಿದೆ. ಮೇಳಗಳು ದೇವಾಲಯಗಳ ಹೆಸರಿನಲ್ಲಿ ಹೊರಡುವ ಕಾರಣದಿಂದಾಗಿ ಯಕ್ಷಗಾನಕ್ಕೆ ದೈವಿಕ ಕಲೆ ಇದೆ. ಯಕ್ಷಗಾನ ಶುದ್ಧ ಕನ್ನಡ ಭಾಷೆಯನ್ನು ಕಲಿಸುವ ಜತೆಗೆ ಸಂಸ್ಕೃತಿ, ಸಂಸ್ಕಾರ ಮೈಗೂಡಿಸಿಕೊಳ್ಳಲು ಪೂರಕವಾಗಿದೆ ಎಂದರು.

ಯಕ್ಷಗಾನ ಕಲಾವಿದ, ವಿಧ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಒಂದು ವರ್ಷದ ಅವಧಿಯಲ್ಲಿ ಅಗಲಿದ ಯಕ್ಷಗಾನ ಕಲಾವಿದರಾದ ಸುಬ್ರಹ್ಮಣ್ಯ ಧಾರೇಶ್ವರ, ಲೀಲಾವತಿ ಬೈಪಡಿತ್ತಾಯ, ಗಂಗಾಧರ ಜೋಗಿ ಪುತ್ತೂರು, ಕುಂಬ್ಳೆ ಶ್ರೀಧರ ರಾವ್, ಬಂಟ್ವಾಳ ಜಯರಾಮ ಆಚಾರ್ಯ, ಕೀಲಾರು ವಿಜಯಲಕ್ಷ್ಮೀ ಅಮ್ಮ ಮೊದಲಾದ 14ಕ್ಕೂ ಅಧಿಕ ಮಂದಿ ಕಲಾವಿದರಿಗೆ ನುಡಿ ನಮನ ಸಲ್ಲಿಸಿದರು.

ಮಂಗಳೂರಿನ ಹಿರಿಯ ವಕೀಲರಾದ ಪಿ. ಸಂತೋಷ ಐತಾಳ ಹಾಗೂ ದಯಾನಂದ ರೈ ಮುಖ್ಯ ಅತಿಥಿಗಳಾಗಿದ್ದರು. ಎಸ್‌ಡಿಎಂ ಪ್ರಾಂಶುಪಾಲ ಡಾ.ತಾರಾನಾಥ ಅಧ್ಯಕ್ಷತೆ ವಹಿಸಿದ್ದರು. ಯಕ್ಷೋತ್ಸವ ವಿಧ್ಯಾರ್ಥಿ ಸಂಚಾಲಕ ಶಿವತೇಜ ಐತಾಳ್ ಉಪಸ್ಥಿತರಿದ್ದರು.

ಯಕ್ಷೋತ್ಸವ ಸಂಚಾಲಕ ಪ್ರೊ. ಪುಷ್ಪರಾಜ್ ಕೆ. ಸ್ವಾಗತಿಸಿದರು. ಸಂಚಾಲಕಿ ಡಾ.ಶುಭಲಕ್ಷ್ಮೀ ಪಿ. ವಂದಿಸಿದರು. ಶ್ರೀಲಕ್ಷ್ಮೀ ಮಠದಮೂಲೆ ಕಾರ್ಯಕ್ರಮ ನಿರೂಪಿಸಿದರು. ಎರಡು ದಿನಗಳ ಕಾಲ ನಡೆಯುವ ಯಕ್ಷೋತ್ಸವದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಿಂದ ಒಟ್ಟು 10 ಕಾಲೇಜುಗಳು ಭಾಗವಹಿಸಿದ್ದು, ಒಟ್ಟಾಗಿ 8 ಪ್ರಸಂಗಗಳು ಪ್ರದರ್ಶನಗೊಳ್ಳುತ್ತಿದೆ.

ಯಕ್ಷಗಾನ ತರಬೇತಿ ಕೇಂದ್ರ ಆರಂಭಕ್ಕೆ ಚಿಂತನೆ

ಎಸ್‌ಡಿಎಂ ಕಾನೂನು ಹಾಗೂ ಉದ್ಯಮಾಡಳಿತ ಕಾಲೇಜಿನ ಕಟ್ಟಡ ವಿಸ್ತರಣೆಯಾಗುತ್ತಿದ್ದು, ನಾಗರಿಕ ಸೇವೆ ತರಬೇತಿ ಹಾಗೂ ಯಕ್ಷಗಾನ ತರಬೇತಿ ಕೇಂದ್ರ ಆರಂಭಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ ಎಂದು ಪ್ರಾಂಶುಪಾಲ ಡಾ.ತಾರಾನಾಥ ಹೇಳಿದರು.

35 ನೇ ವರ್ಷದ ಯಕ್ಷೋತ್ಸವದಲ್ಲಿ ಇಲ್ಲಿನ ಯಕ್ಷೋತ್ಸವದ ತಳಹದಿಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಕರೆಸಿ ಅವರಿಂದಲೇ ಯಕ್ಷಗಾನ ಪ್ರದರ್ಶನ ಮಾಡಿಸುವ ಯೋಜನೆ ಇದೆ. ಯಕ್ಷೋತ್ಸವ ಸಂಘಟನೆ ಸುಲಭವಲ್ಲ. ಇದರ ಹಿಂದೆ ಬಹಳಷ್ಟು ಶ್ರಮವಿದೆ. ಆದರೂ ವರ್ಷದಿಂದ ವರ್ಷಕ್ಕೆ ಉತ್ತಮ ರೀತಿಯಲ್ಲಿ ನಡೆಯುತ್ತಾ ಬರುತ್ತಿದೆ ಎಂದವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net